ವೀರಾಜಪೇಟೆ, ಜ. ೨೮: ಮೇಯಲು ಬಿಟ್ಟಿದ್ದ ಹಸುವನ್ನು ಕಳ್ಳತನಗೈದು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಗ್ರಾ.ಪಂ. ಸದಸ್ಯನ ವಿರುದ್ಧ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಜಿ ಗ್ರಾಮದ ನಿವಾಸಿ ಬಿ.ಎಸ್. ವಿಠಲ ಎಂಬವರಿಗೆ ಸೇರಿದ ಹಸುವನ್ನು ಕದ್ದು ಮಾರಾಟ ಮಾಡಿದ್ದ ಆರೋಪದಡಿ ಪೆರುಂಬಾಡಿ ಗ್ರಾಮದ ನಿವಾಸಿ, ಆರ್ಜಿ ಗ್ರಾ.ಪಂ. ಹಾಲಿ ಸದಸ್ಯ ಕೆ.ಎನ್. ಉಪೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರ್ಜಿ ಗ್ರಾಮದ ವಿಠಲ ಅವರು ಕಳೆದ ೨೫ ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಾ. ೨೫ ರಂದು ೫ ಹಸು ಸೇರಿದಂತೆ ೨ ಕರುಗಳನ್ನು ಮೇಯಲು ಬಿಟ್ಟಿದ್ದರು. ಸಂಜೆ ಮೇಯಲು ಬಿಟ್ಟಿದ್ದ ಜಾನುವಾರುಗಳ ಪೈಕಿ ಒಂದು ಹಸು ಮನೆಗೆ ಹಿಂದಿರುಗಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಬೇಟೋಳಿ ಸುತ್ತಮುತ್ತ ಹುಡುಕಾಟ ನಡೆಸಿದ ಸಂದರ್ಭ ಗುಂಡಿಕೆರೆ ಬಳಿಯ ಉಮ್ಮರ್ ಎಂಬವರ ಮನೆ ಆವರಣದಲ್ಲಿ ಹಸು ಪತ್ತೆಯಾಗಿದೆ.

ವಿಚಾರಿಸಿದ ಸಂದರ್ಭ ಉಪೇಂದ್ರ ರೂ. ೭ ಸಾವಿರಕ್ಕೆ ಹಸು ಮಾರಾಟ ಮಾಡಿರುವುದಾಗಿ ಉಮ್ಮರ್ ತಿಳಿಸಿದ್ದಾರೆ. ಅನಂತರ ಠಾಣೆಯಲ್ಲಿ ಹಸು ಮಾಲಿಕ ವಿಠಲ ದೂರು ದಾಖಲಿಸಿದ್ದಾರೆ. ಈ ನಡುವೆ ಉಮ್ಮರ್ ಹಸುವನ್ನು ಉಪೇಂದ್ರ ಮನೆಗೆ ತಂದು ಬಿಟ್ಟು ವಿಚಾರ ತಿಳಿಸಿದ್ದು, ಇದೀಗ ಆರೋಪಿ ತಲೆಮರೆಸಿಕೊಂಡಿದ್ದಾನೆ. - ಕಿಶೋರ್ ಕುಮಾರ್ ಶೆಟ್ಟಿ