ಸೋಮವಾರಪೇಟೆ, ಜ. ೨೮: ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚದ ಹಾವಳಿ ಮಿತಿಮೀರಿದ್ದು, ಹಣ ನೀಡಿದವರ ಕೆಲಸಗಳು ಮಾತ್ರವೇ ನಡೆಯುತ್ತಿವೆ. ನೋಂದಣಿ ಸಂದರ್ಭ ವಕೀಲರಿಂದಲೂ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಜನಸಾಮಾನ್ಯರು ಸಮಸ್ಯೆಗೆ ಸಿಲುಕಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರ ಸಂಘದಿAದ ದೂರುಗಳು ಸಲ್ಲಿಕೆಯಾದ ಕೆಲ ದಿನಗಳಲ್ಲಿಯೇ ಉಪ ನೋಂದಣಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ.
ಇಲ್ಲಿನ ಪ್ರಬಾರ ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಆಲಿ ಅವರನ್ನು ಪೊನ್ನಂಪೇಟೆಗೆ ವರ್ಗಾಯಿಸಿದ್ದು, ಪೊನ್ನಂಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ಕುಮಾರ್ ಅವರನ್ನು ಸೋಮವಾರಪೇಟೆ ಪ್ರಬಾರ ಉಪ ನೋಂದಣಾಧಿಕಾರಿಯಾಗಿ ನೇಮಿಸಲಾಗಿದೆ.
ತಾ. ೨೧ ರಂದು ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ನೇತೃತ್ವದಲ್ಲಿ ತಾಲೂಕು ಕಚೇರಿಗೆ ತೆರಳಿದ ವಕೀಲರುಗಳು, ನೋಂದಣಾಧಿಕಾರಿಗಳ ಕಚೇರಿಯಲ್ಲಾಗುತ್ತಿರುವ ಲಂಚಾವತಾರದ ಬಗ್ಗೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಸಂಬAಧಿತ ದೂರನ್ನು ಕಂದಾಯ ಸಚಿವರು, ಇಲಾಖೆಯ ಮುಖ್ಯಕಾರ್ಯದರ್ಶಿಗಳು, ಶಾಸಕರು, ನೋಂದಣಿ ಮಹಾ ಪರಿವೀಕ್ಷಕರು, ಜಿಲ್ಲಾ ನೋಂದಣಾಧಿಕಾರಿಗಳು, ಲೋಕಾಯುಕ್ತ ಅಧೀಕ್ಷಕರಿಗೂ ದೂರು ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರು, ತಾ. ೨೭ರಂದು ಆದೇಶ ಹೊರಡಿಸಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸ್ಥಳ ಬದಲಾವಣೆ ಮಾಡಿದ್ದಾರೆ. ಅದರಂತೆ ಪೊನ್ನಂಪೇಟೆಯಲ್ಲಿದ್ದ ಎಸ್.ಎ. ಪ್ರವೀಣ್ಕುಮಾರ್ ಅವರನ್ನು ಸೋಮವಾರಪೇಟೆ ಉಪ ನೊಂದಣಾಧಿಕಾರಿಗಳಾಗಿ (ಪ್ರಬಾರ) ನಿಯೋಜಿಸಿದ್ದು, ಇಂದಿನಿAದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈವರೆಗೆ ಸೋಮವಾರಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಆಲಿ ಅವರನ್ನು ಪೊನ್ನಂಪೇಟೆ ತಾಲೂಕು ಉಪ ನೋಂದಣಾಧಿಕಾರಿಯಾಗಿ (ಪ್ರಬಾರ) ನಿಯೋಜಿಸಿ ಮುಂದಿನ ಆದೇಶದವರೆಗೆ ವರ್ಗಾಯಿಸಲಾಗಿದೆ.