ವೀರಾಜಪೇಟೆ, ಜ. ೯: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ರಾದ ಎ.ಎಸ್. ಪೊನ್ನಣ್ಣ ಅವರ ಪ್ರಯತ್ನದಿಂದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಟ್ಟು ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಶ್ರೀ ನಾರಾಯಣ ಗುರು ಸಮುದಾಯ ಭವನದ ಕಾಮಗಾರಿಗೆ ರೂ. ಒಂದು ಕೋಟಿ, ಹಾಕತ್ತೂರು ತೊಂಬತ್ತು ಮನೆ ಸಮುದಾಯ ಭವನ ಮುಂದುವರಿದ ಕಾಮಗಾರಿಗೆ ಐದು ಲಕ್ಷ ರೂಗಳು, ನಾಪೋಕ್ಲು ಇಂದಿರಾ ನಗರದಲ್ಲಿ ಸಮುದಾಯ ಭವನ ಕಾಮಗಾರಿಗೆ ಹತ್ತು ಲಕ್ಷ ರೂ. ಗಳು, ಚೆನ್ನಯ್ಯನ ಕೋಟೆ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಗಳು, ಕೆದಮುಳ್ಳೂರು ದವಸ ಭಂಡಾರ ಪಕ್ಕ ಸಮುದಾಯ ಭವನ ಕಾಮಗಾರಿಗೆ ೧೫ ಲಕ್ಷ ರೂ.ಗಳು, ಗೋಣಿಕೊಪ್ಪದಲ್ಲಿ ಸ್ವಾತಂತ್ರö್ಯ ಸಮುದಾಯ ಭವನ ಕಾಮಗಾರಿಗೆ ಮೂವತ್ತು ಲಕ್ಷ ರೂ. ಗಳು, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಕೊಡವ ಸಮಾಜ ಸಮುದಾಯ ಭವನ ಕಾಮಗಾರಿಗೆ ೨೫ ಲಕ್ಷ ರೂ. ಗಳು, ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಶ್ರೀ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಹತ್ತು ಲಕ್ಷ ರೂ. ಗಳು ಸೇರಿದಂತೆ ವೀರಾಜಪೇಟೆ ಕ್ಷೇತ್ರದಾದ್ಯಂತ ಒಟ್ಟು ಎಂಟು ಆಯ್ದ ಕಾಮಗಾರಿಗೆ ಎರಡು ಕೋಟಿ ಅನುದಾನ ಬಿಡುಗಡೆಯಾಗಿದ್ದು ಮುಂದಿನ ವಾರ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಶ್ರೀ ನಾರಾಯಣ ಗುರು ಸಮುದಾಯ ಭವನದ ನಿರ್ಮಾಣಕ್ಕೆ ಸಮುದಾಯದ ಜನರು ಚುನಾವಣಾ ಪೂರ್ವದಲ್ಲಿ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಮಾಡಿಕೊಂಡ ಮೇರೆಗೆ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪೊನ್ನಣ್ಣ ಅವರು ಭರವಸೆ ನೀಡಿದ್ದರು.

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಾವು ಕ್ಷೇತ್ರದ ಎಲ್ಲಾ ಭಾಗಗಳಿಗೆ ತೆರಳಿ ಅಲ್ಲಿನ ಜನರ ಬೇಡಿಕೆಗಳನ್ನು ಗಮನಿಸಿ ಪ್ರತ್ಯೇಕ ಪ್ರಣಾಳಿಕೆಯನ್ನು ಜನತೆಯ ಮುಂದಿಟ್ಟಿದ್ದೆ. ಅವುಗಳನ್ನು ಈಡೇರಿಸುವುದು ನನ್ನ ಆದ್ಯ ಕರ್ತವ್ಯ ಎಂದು ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.