ಕುಶಾಲನಗರ, ನ. ೨೪: ಕುಶಾಲನಗರ ಶ್ರೀ ಮಹಾಗಣಪತಿ ರಥೋತ್ಸವ ಅಂಗವಾಗಿ ಪಟ್ಟಣದಲ್ಲಿ ಕಳೆದ ೧೦ ದಿನಗಳ ಕಾಲ ವಿವಿಧ ರೀತಿಯ ಉತ್ಸವಾದಿಗಳು ಜರುಗಿದ್ದು ಭಾನುವಾರ ದೇವರ ತೀರ್ಥ ಸ್ನಾನದೊಂದಿಗೆ ದೇವಾಲಯದ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ತೆರೆ ಬಿತ್ತು.
ಐತಿಹಾಸಿಕ ದೇವಾಲಯದಲ್ಲಿ ದಿನನಿತ್ಯ ಸೇವಾರ್ಥದಾರರಿಂದ ದೀಪಾರಾಧನೆ, ಮೂಷಿಕ ವಾಹನ ಉತ್ಸವ, ವೃಷಭ ವಾಹನ ಸೇವೆ ,ಅಶ್ವರೂಢ ವಾಹನ ಸೇವೆ ಉಯ್ಯಾಲೋತ್ಸವ, ಮಯೂರರೂಢ ಸೇವೆ, ಶನಿವಾರ ರಾತ್ರಿ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಯುವ ಮೂಲಕ ವಿವಿಧ ರೀತಿಯ ಉತ್ಸವಗಳು ಆಕರ್ಷಕವಾಗಿ ಅದ್ದೂರಿಯಾಗಿ ನಡೆದವು.
ಭಾನುವಾರ ಬೆಳಿಗ್ಗೆ ಕಾವೇರಿ ನದಿಯಲ್ಲಿ ಆದಿಶೇಷ ರೂಢ ಹೂವಿನ ಮಂಟಪ ಪಲ್ಲಕ್ಕಿ ಸೇವೆ ಜೊತೆಗೆ ತೀರ್ಥ ಸ್ನಾನ ನಂತರ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ರಕ್ಷಾಬಂಧನ ವಿಮೋಚನೆ, ಧ್ವಜ ಅವರೋಹಣ ನಂತರ ಅವಭೃತ ಸ್ನಾನ, ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ನೇತೃತ್ವದಲ್ಲಿ ರಾಘವೇಂದ್ರ ಭಟ್ ಮತ್ತಿತರ ಅರ್ಚಕರು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾದ ಎಂ.ಕೆ. ದಿನೇಶ್ ಉಸ್ತುವಾರಿಯಲ್ಲಿ ಈ ಬಾರಿ ವಿಶೇಷವಾಗಿ ಉತ್ಸವಾದಿಗಳನ್ನು ಅದ್ದೂರಿಯಾಗಿ ನಡೆಸುವ ಸಲುವಾಗಿ ಕುದುರೆಗಾಡಿ, ಎತ್ತಿನಗಾಡಿ ಮತ್ತಿತರ ರಥಗಳ ಮೂಲಕ ಪಲ್ಲಕ್ಕಿ ಸೇವೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರ ಗಣಪತಿ ವಾರ್ಷಿಕ ಜಾತ್ರೆ ಅಂಗವಾಗಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಮುಖ್ಯರಸ್ತೆ ಬೀದಿಗಳಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದೆ. ಜಾತ್ರೆ ಅಂಗವಾಗಿ ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮೂಲಕ ಹಲವು ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಜಾತ್ರಾ ಮೈದಾನದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಡಿಸೆಂಬರ್ ೧ ರ ತನಕ ವಿವಿಧ ರೀತಿಯ ನೃತ್ಯ, ಮತ್ತಿತರ ಕಾರ್ಯಕ್ರಮಗಳು ಮುಂದುವರಿಯಲಿವೆ.
ಡಿಸೆAಬರ್ ೭ರಿಂದ ಮೂರು ದಿನಗಳ ಕಾಲ ಜಾತ್ರಾ ಮೈದಾನದಲ್ಲಿ ಗೋ ಜಾತ್ರೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ ೯ ರಂದು ಸಂಜೆ ೪ ಗಂಟೆಗೆ ಜಾತ್ರಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯುವುದು.
-ಚಂದ್ರಮೋಹನ್