ಕುಶಾಲನಗರ, ಅ. ೩೧: ಜನಪದ ಸಿರಿ ಕನ್ನಡ ತಂಡದ ಆಶ್ರಯದಲ್ಲಿ ನವಂಬರ್ ೯ ರಂದು ಕುಶಾಲನಗರದ ಕೂಡ್ಲೂರು ವೀರಭೂಮಿ ಜನಪದ ಗ್ರಾಮದಲ್ಲಿ ಹಿ.ಚಿ ಹಬ್ಬ ಮತ್ತು ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ -೨೦೨೪ ಹಮ್ಮಿಕೊಳ್ಳಲಾಗಿದೆ ಎಂದು ಜನಪದ ಸಿರಿ ತಂಡದ ಮುಖ್ಯಸ್ಥ ಜರಗನಹಳ್ಳಿ ಕಾಂತರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಗಿರಿಜನ ಜಾನಪದ ಸಂಪತ್ತು ಎಂದು ಖ್ಯಾತರಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರು ಆಗಿರುವ ಡಾ. ಹಿ.ಚಿ ಬೋರಲಿಂಗಯ್ಯ ಅವರಿಗೆ ೭೦ ವರ್ಷ ಸಂದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದರು. ಬುಡಕಟ್ಟು ಗಿರಿಜನರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ಡಾ.ಬೋರಲಿಂಗಯ್ಯ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಗುವುದು.

ಶಾಸ್ತಿçÃಯ ಕಲೆಗಾರರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಜಾನಪದ ಕಲೆಗಾರರಿಗೆ ಕೂಡ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳ ನಡುವೆ ಅಲೆದು ಬುಡಕಟ್ಟು ಜನರ ಸಂಪರ್ಕ ಮಾಡುವ ಮೂಲಕ ನಾಡಿಗೆ ಪರಿಚಯಿಸಿದ ಡಾ ಬೋರಲಿಂಗಯ್ಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಬುಡಕಟ್ಟು ಕಲಾವಿದರನ್ನು ಒಂದೆಡೆ ಸೇರಿಸುವ ಕಾರ್ಯಕ್ರಮ ಇದಾಗಿದೆ. ಸುಮಾರು ೧೦ ಬುಡಕಟ್ಟು ಜನಾಂಗ ಒಂದೇ ಕಡೆ ಸೇರಿ ನಾನಾ ಪ್ರಕಾರ ಕಲೆಗಳ ಪ್ರದರ್ಶನ ನಡೆಯಲಿದೆ ಎಂದು ಕಾಂತರಾಜು ತಿಳಿಸಿದರು. ಅಂದು ನಡೆಯುವ ಜನಪದ ಸಿರಿ ಕಾರ್ಯಕ್ರಮದಲ್ಲಿ ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ವಿವರಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ರಾಂತ ಕುಲಪತಿಗಳು, ನಾಡಿನ ಖ್ಯಾತ ಜಾನಪದ ಗಾಯಕರು, ಜನಪ್ರತಿನಿಧಿಗಳು, ಜಾನಪದ ತಜ್ಞರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು. ವಿವಿಧ ಸಮುದಾಯಗಳ ನೆಲಮೂಲ ಸಂಸ್ಕೃತಿಯ ಪ್ರತಿನಿಧಿಗಳಿಗೆ ಕಲಾವಿದರಿಗೆ ಖ್ಯಾತ ರಂಗ ನಿರ್ದೇಶಕರುಗಳಿಗೆ ಜಾನಪದ ಕಲೆಗಳ ಪರಿಚಯಕರಿಗೆ ಈ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವೀರಭೂಮಿ ಜನಪದ ಗ್ರಾಮದ ಪ್ರಧಾನ ವ್ಯವಸ್ಥಾಪಕ ಎಂ.ಪಿ. ಅವಿನಾಶ್, ವ್ಯವಸ್ಥಾಪಕ ಹೆಚ್.ಆರ್. ನಾಗೇಂದ್ರ ಮತ್ತು ಜಿ.ಕೆ. ಪೃಥ್ವಿರಾಜ್ ಇದ್ದರು.