ಗೋಣಿಕೊಪ್ಪಲು, ಅ. ೪: ೪೬ನೇ ವರ್ಷದ ಗೋಣಿಕೊಪ್ಪ ದಸರಾ ಸಾಂಪ್ರದಾಯಿಕ ಆಚರಣೆಗೆ ದೇವಿ ಪ್ರತಿಷ್ಠಾಪನೆಯ ಮೂಲಕ ಚಾಲನೆ ದೊರೆತ್ತಿದ್ದು, ಅದರಂತೆ ದಶರಾತ್ರಿ ಮನಸೂರೆಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.
ಪಟ್ಟಣದ ಸರಕಾರಿ ಪ್ರೌಢಶಾಲೆ ಮೈದಾನದ ಕಾವೇರಿ ಕಲಾವೇದಿಕೆ ಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪೊನ್ನಣ್ಣ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಬಳಿಕ ಮಾತನಾಡಿದರು.
ಕರ್ನಾಟಕ ಸರ್ಕಾರ ಗೋಣಿಕೊಪ್ಪ ದಸರಾ ಜನೋತ್ಸವದ ಯಶಸ್ವಿಗೆ ಈ ಬಾರಿ ರೂ. ೭೫ ಲಕ್ಷ ಅನುದಾನವನ್ನು ನೀಡಿದೆ. ಇದರೊಂದಿಗೆ ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾಕ್ಕೂ ರೂ. ೧.೫೦ ಕೋಟಿ ಅನುದಾನವನ್ನು ನೀಡುವ ಮೂಲಕ ನಾಡ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅವಕಾಶ ಕಲ್ಪಿಸಿದೆ. ಸರ್ಕಾರ ನೀಡಿರುವ ಅನುದಾನವನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡುವ ಮೂಲಕ ಸ್ಥಳೀಯ ಕಲಾವಿದರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಸಮಿತಿ ವತಿಯಿಂದ ನಡೆಯಬೇಕು. ಸರ್ಕಾರವು ಕಳೆದ ಬಾರಿ ರೂ. ೬೦ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿತ್ತು ಕಳೆದ ಬಾರಿಯೂ ಉತ್ತಮ ರೀತಿಯ ದಸರಾವನ್ನು ಸಮಿತಿಯು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಿದೆ. ಗೋಣಿಕೊಪ್ಪ ದಸರಾ ಜನೋತ್ಸವ ನಾಡಿನ ಜನತೆಯ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ನಡೆಯಬೇಕು. ಯಾವುದೇ ಅಡೆತಡೆ ಎದುರಾಗಬಾರದು. ಸಣ್ಣಪುಟ್ಟ ವ್ಯತ್ಯಾಸವಿದ್ದಲ್ಲಿ ಅದನ್ನು ಆಯೋಜಕರು ಕುಳಿತು ಸರಿಪಡಿಸಬೇಕು. ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತರುವಂತೆ ತಿಳಿಸಿದರು.(ಮೊದಲ ಪುಟದಿಂದ) ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ಅನನ್ಯ ವನ್ಯಸಂಪತ್ತು, ಪರಿಸರ, ವಾತಾವರಣವನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿನ ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನವರಾತ್ರಿ ಉತ್ಸವಕ್ಕೆ ಜಿಲ್ಲಾಡಳಿತ ಪೂರ್ಣ ಸಹಕಾರ ನೀಡುತ್ತಿದೆ. ಕ್ಷೇತ್ರದ ಶಾಸಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ನೀಡಬೇಕಾಗಿದೆ. ಪರಿಸರ ಸ್ನೇಹಿಯಾಗಿ ದಸರಾವನ್ನು ಆಚರಣೆ ಮಾಡೋಣ ಎಂದ ಅವರು, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ. ಶಾಂತಿ ಸೌಹಾರ್ದತೆಯಲ್ಲಿ ಹಬ್ಬ ಆಚರಣೆ ಮಾಡಬೇಕು. ಈ ಹಿಂದೆಯೂ ದಸರಾ ಉತ್ತಮವಾಗಿ ನಡೆದಿದೆ. ಈ ಬಾರಿ ಅರ್ಥಪೂರ್ಣದೊಂದಿಗೆ ನವರಾತ್ರಿಯನ್ನು ಯಶಸ್ವಿಯಾಗಿ ನಡೆಸೋಣ…ಎಂದು ಕರೆ ನೀಡಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಗೋಣಿಕೊಪ್ಪ ದಸರಾಕ್ಕೆ ತನ್ನದೆ ಆದ ವಿಶೇಷತೆ ಇದೆ. ೪೫ ವರ್ಷಗಳು ಅತ್ಯಂತ ಯಶಸ್ವಿಯಾಗಿ ದಸರಾ ಆಚರಣೆಯಾಗಿದೆ. ಪ್ರೇಕ್ಷಕರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸ್ಥಳೀಯ ಪ್ರತಿಭೆಗಳಿಗೂ ಉತ್ತಮ ಅವಕಾಶ ಲಭಿಸುತ್ತಿದೆ. ಪ್ರತಿವರ್ಷವು ಉತ್ತಮವಾಗಿ ದಸರಾ ಆಚರಣೆ ಆಗಲಿ ಎಂದು ಆಶಿಸಿದರು.
ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ್ ಕಾಮತ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕುಸುಮ ಜೋಯಪ್ಪ, ದಸರಾ ಸಮಿತಿಯ ಮಾಜಿ ಅಧ್ಯಕ್ಷ ಕೊಪ್ಪಿರ ಸನ್ನಿ ಸೋಮಯ್ಯ, ನಿರ್ದೇಶಕ, ನಿರ್ಮಾಪಕ ಹಾಗೂ ಹಿರಿಯ ಪತ್ರಕರ್ತ ಇಂದ್ರಜಿತ್ ಲಂಕೇಶ್ ಹಾಗೂ ಗೌರಿ ಚಿತ್ರನಟ, ನಾಯಕ ಸಮರ್ಜಿತ್ ಲಂಕೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭ ಇಂದ್ರಜಿತ್ ಲಂಕೇಶ್ ಹಾಗೂ ಸಮರ್ಜಿತ್ ಲಂಕೇಶ್ ಅವರನ್ನು ಶಾಸಕ ಪೊನ್ನಣ್ಣ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ದಸರಾ ಸಮಿತಿಯ ಪ್ರಮುಖರಾದ ಚಂದನ್ ಕಾಮತ್ ಮಾತನಾಡಿದರು. ಗ್ರಾ.ಪಂ. ಸದಸ್ಯ ಬಿ.ಎನ್. ಪ್ರಕಾಶ್ ಸ್ವಾಗತಿಸಿ, ಪ್ರಾಧಾನ ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾಸಕ ಎ.ಎಸ್. ಪೊನ್ನಣ್ಣ ಸ್ಥಳೀಯ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. -ಹೆಚ್.ಕೆ. ಜಗದೀಶ್