ಮಡಿಕೇರಿ, ಅ.೪ : ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಇಲ್ಲಿನ ಪೂರ್ವಜರು ನೂರಾರು ಸಂಕಷ್ಟಗಳ ನಡುವೆ ನೆಲೆ ನಿಲ್ಲುವಲ್ಲಿ ಸಫಲರಾದರು. ವಿಭಿನ್ನ ಆಚಾರ-ವಿಚಾರ ಸಂಸ್ಕೃತಿಯ ಆಚರಣೆಗಳನ್ನು ಆಚರಿಸುತ್ತಾ ಬಂದರು. ಇಂದು ಜಿಲ್ಲೆಯ ನಿವಾಸಿಗಳು ಹಬ್ಬ-ಹರಿದಿನಗಳಲ್ಲಿ ಪೂರ್ವಜರ ಸಂಸ್ಕೃತಿ-ಆಚಾರಗಳನ್ನು ಪಾಲಿಸುವುದರಿಂದ ಅವರುಗಳಿಗೆ ಗೌರವ ನೀಡುವುದು ಅಗತ್ಯವಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಕೂಡ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಆಚರಣೆಗಳು, ಕೊಡಗಿನಿಂದ ಹೊರಗೆಲ್ಲೂ ಕಾಣಸಿಗದ ವಾಲಗ ಇತ್ಯಾದಿ ವಾದ್ಯಗಳ ಮೂಲಕ ಸ್ಥಳೀಯ ಸಂಪ್ರದಾಯ ಅನಾವರಣ ಆಗಬೇಕಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ದಸರಾದಲ್ಲಿ ಜಂಬೂ ಸವಾರಿ ಇತ್ಯಾದಿ ಸ್ಥಳೀಯ ಸಂಸ್ಕೃತಿ ಅನಾವರಣಗೊಳ್ಳುವ ಕಾರಣ ವಿದೇಶಿಗರೂ ಆಗಮಿಸಿ ಮನರಂಜನೆ ಪಡೆಯುತ್ತಾರೆ. ಡಿ.ಜೆ ಎಂಬುದು ಪಾಶ್ಚಾತ್ಯ ಸಂಸ್ಕೃತಿ. ಪಬ್, ಕ್ಲಬ್ ಇತ್ಯಾದಿ ಕಡೆಗಳಲ್ಲಿಯೂ ಈ ರೀತಿಯ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ನಿಟ್ಟಿನಲ್ಲಿ ಮಡಿಕೇರಿ ದಸರಾದಲ್ಲಿ ಸ್ಥಳೀಯ ಸಂಪ್ರದಾಯ ಹೆಚ್ಚಾಗಿ ಬಿಂಬಿತವಾಗಲಿ ಎಂದು ಅವರು ಆಶಿಸಿದರು.

ಮಂಟಪಗಳ ಧ್ವನಿಯ ಮಿತಿ ಗರಿಷ್ಠ ೭೫ ಡೆಸಿಬಲ್ - ಮಾಲಿನ್ಯ ನಿಯಂತ್ರಣ ಮಂಡಳಿಯಿAದ ನಿಗಾ

ಕೈಗಾರಿಕಾ ಪ್ರದೇಶಗಳಲ್ಲಿ ಕಾನೂನಿನ ಪ್ರಕಾರ ಗರಿಷ್ಠ ಧ್ವನಿ ಮಿತಿಯು ೭೫ ಡೆಸಿಬಲ್ ಆಗಿದೆ. ವಸತಿ ಪ್ರದೇಶ, ವಾಣಿಜ್ಯ ಪ್ರದೇಶಗಳಲ್ಲಿ ಇದರ ಮಿತಿ ಇನ್ನೂ ಕಡಿಮೆ ಇದೆ. ಈ ಕಾನೂನು ದಶಮಂಟಪಗಳ ಶೋಭಾಯಾತ್ರೆ ಸಂದರ್ಭ ಪಾಲನೆಯಾಗುವಂತೆ ಮಂಟಪ ಸಮಿತಿಗಳು ಎಚ್ಚರವಹಿಸಬೇಕಿದೆ. ಕಳೆದ ಬಾರಿಗಿಂತ ಈ ಬಾರಿ ಸ್ಪೀಕರ್‌ಗಳ ಸಂಖ್ಯೆ ಹಾಗೂ ಧ್ವನಿ ಸಾಮರ್ಥ್ಯವನ್ನು ಎಲ್ಲ ಮಂಟಪಗಳು ಕಡಿಮೆ ಮಾಡಿವೆ. ಧ್ವನಿ ಮಿತಿಯು ಗರಿಷ್ಠ ಮಟ್ಟ

(ಮೊದಲ ಪುಟದಿಂದ) ದಾಟುವುದಿಲ್ಲ ಎಂಬ ಭಾವನೆಯಿದೆ. ಧ್ವನಿ ಮಿತಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ ಪರಿಕರವೊಂದರ ಮೂಲಕ ಮಾಪನ ಮಾಡುತ್ತಾರೆ. ನಂತರ ಮಾಹಿತಿಯನ್ನು ನ್ಯಾಯಾಲಯಕ್ಕೆ ರವಾನಿಸುತ್ತಾರೆ. ಈ ವಿಷಯವು ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಮರಾಜನ್ ಅವರು ಮಾಹಿತಿ ನೀಡಿದರು. ಹೆಚ್ಚಿನ ಧ್ವನಿಯಿಂದಾಗಿ ಹಿರಿಯರು, ರೋಗಿಗಳು, ಪ್ರಾಣಿ ಪಕ್ಷಿಗಳಿಗೆ ಸೇರಿದಂತೆ ರಾತ್ರಿ ಇಡೀ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೂ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ವಾಸ್ತವಾಂಶವನ್ನು ಅರಿಯುವುದು ಇಲ್ಲಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನನ್ನು ರೂಪಿಸಲಾಗಿದೆ ಹೊರತು ಹಬ್ಬಾಚರಣೆಗೆ ತೊಂದರೆ ಕೊಡುವ ಅಥವಾ ಶಿಕ್ಷೆಯನ್ನು ನೀಡುವ ಯಾವುದೇ ಉದ್ದೇಶವಿಲ್ಲ ಎಂದು ರಾಮರಾಜನ್ ಅವರು ಈ ಸಂದರ್ಭ ತಿಳಿಸಿದರು.

ಕಾರ್ಯಕ್ರಮವನ್ನು ಕೊಡಗು ಪ್ರೆಸ್ ಕ್ಲಬ್ ಸದಸ್ಯ ಆನಂದ್ ನಿರೂಪಿಸಿದರು. ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಶಿವರಾಜ್ ವಂದಿಸಿದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜೀರ ಬಿ ಅಯ್ಯಪ್ಪ, ಕಾರ್ಯಕ್ರಮದ ಸಂಚಾಲಕ ಲೋಹಿತ್, ದಸರಾ ದಶಮಂಟಪ ಸಮಿತಿಯ ಸದಸ್ಯರು, ಪ್ರೆಸ್‌ಕ್ಲಬ್ ಸದಸ್ಯರು ಹಾಜರಿದ್ದರು.ದಸರಾ ನಂತರ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಗೆ ಪರಿಹಾರ

ಇತ್ತೀಚೆಗೆ ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಿ ಸ್ಥಳೀಯವಾಗಿ ಇರುವ ಟ್ರಾಫಿಕ್ , ಪಾರ್ಕಿಂಗ್ ಸಮಸ್ಯೆ ಸಂಬAಧ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಪಾರ್ಕಿಂಗ್ ಸಂಬAಧ ಕೆಲವೆಡೆ ಗುರುತು ಮಾಡಲಾಗಿದೆ. ಆದರೆ ಬಣ್ಣ ಬಳಿಯುವುದಕ್ಕೆ ಮಳೆ ಅಡ್ಡಿಯಾಗಿದೆ ಹಾಗೂ ಇದೀಗ ದಸರಾ ಸಂಬAಧ ಹೆಚ್ಚಿನ ಗಮನ ಹರಿಸಬೇಕಿರುವುದರಿಂದ ದಸರಾ ಮುಗಿದ ನಂತರ ಸಭೆಗಳಲ್ಲಿ ಸಂಗ್ರಹಿಸಲ್ಪಟ್ಟ ಅಭಿಪ್ರಾಯಗಳಂತೆ ಮಡಿಕೇರಿ, ಕುಶಾಲನಗರ, ಗೋಣಿಕೊಪ್ಪ, ವೀರಾಜಪೇಟೆ ನಗರ-ಪಟ್ಟಣಗಳಲ್ಲಿ ಟ್ರಾಫಿಕ್, ಪಾರ್ಕಿಂಗ್ ವ್ಯವಸ್ಥೆ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಲಿದೆ ಎಂದು ರಾಮರಾಜನ್ ಅವರು ಮಾಹಿತಿ ನೀಡಿದರು.ಭದ್ರತೆಗೆ ೧,೦೦೦ ಪೊಲೀಸರು - ಅಹಿತಕರ ಘಟನೆ ತಡೆಗೆ ವಿಶೇಷ ತಂಡಗಳು

ವಿಜಯದಶಮಿಯAದು ನಡೆಯುವ ಮಂಟಪಗಳ ಶೋಭಾಯಾತ್ರೆ ಸಂದರ್ಭ ನಗರದಾದ್ಯಂತ ಹೊರಗಿನಿಂದ ಬರುವ ಪೊಲೀಸರೂ ಸೇರಿ ಸುಮಾರು ೧,೦೦೦ ಮಂದಿ ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆ ಕಲ್ಪಿಸಲಿದ್ದಾರೆ. ಪಿಕ್‌ಪಾಕೆಟ್ ತಡೆ, ಹೆಣ್ಣುಮಕ್ಕಳಿಗೆ ತೊಂದರೆ ನೀಡುವುದನ್ನು ತಡೆಯುವುದಕ್ಕೆ ಹಾಗೂ ನಗರದ ಹೊರವಲಯಗಳಲ್ಲಿ ಯುವಕರು ಮದ್ಯಪಾನ ಸೇವನೆ ಮಾಡುವುದನ್ನು ತಡೆಯಲು ಈ ಬಾರಿ ವಿಶೇಷ ತಂಡ ‘ಜಂಬೋ ಟೀಮ್’ ಸೃಷ್ಟಿಸಲಾಗಿದೆ ಎಂದು ಎಸ್.ಪಿ ಮಾಹಿತಿ ಇತ್ತರು. ಪ್ರತಿ ಜಂಬೋ ತಂಡದಲ್ಲಿ ೧೫ ಮಂದಿ ಇರಲಿದ್ದು, ಈ ರೀತಿಯ ೮ ತಂಡಗಳ ರಚನೆ ಮಾಡಲಾಗುತ್ತದೆ. ಹೆಚ್ಚಿನ ಕಣ್ಗಾವಲಿಗೆ ೨ ಡ್ರೋನ್‌ಗಳ ಬಳಕೆ, ಟ್ರಾಫಿಕ್ ನಿಯಂತ್ರಣಕ್ಕೆ ಒಟ್ಟು ಪೊಲೀಸ್ ಸಂಖ್ಯೆಯ ಶೇ.೨೦ ರಷ್ಟು ಮಂದಿ ನಿಯೋಜನೆ ಮಾಡಲಾಗುತ್ತದೆ. ವಿವಿಧೆಡೆ ಸಹಾಯವಾಣಿಗಳನ್ನು ಸ್ಥಾಪಿಸಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ. ಮುಖವಾಡಗಳನ್ನು ಧರಿಸದಂತೆ, ಮಾರಾಟ ಮಾಡದಂತೆ ಸ್ಥಳೀಯಾಡಳಿತದಿಂದ ಆದೇಶ ಹೊರಡಿಸಲಾಗುವುದು ಎಂದರು. ಅಹಿತಕರ ಘಟನೆಗಳು ನಡೆದಲ್ಲಿ ಸಾರ್ವಜನಿಕರು ಕೂಡ ಇದರ ವೀಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥರನ್ನು ಕಂಡು ಹಿಡಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಪ್ರತಿ ಮಂಟಪಕ್ಕೆ ೮ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಅಧಿಕಾರಿ ನಿಯೋಜಿಸಲಾಗುವುದು. ನಗರದ ವಿವಿಧೆಡೆ ವೈದ್ಯರ ಸಹಕಾರದಿಂದ ಪ್ರಥಮ ಚಿಕಿತ್ಸಾ ವ್ಯವಸ್ಥೆ, ಆ್ಯಂಬುಲೆನ್ಸ್, ಸ್ಟೆçಚ್ಚರ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಮಾದಕ ವಸ್ತು ತಡೆ ಒಂದು ದಿನದ ಕೆಲಸವಲ್ಲ

ಮಾದಕ ವಸ್ತು ಬಳಕೆ, ಮಾರಾಟವನ್ನು ತಡೆಯುವುದು ಒಂದೇ ದಿನದಲ್ಲಿ ಆಗುವುದಿಲ್ಲ. ಇದೊಂದು ನಿರಂತರ ಹೋರಾಟ. ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಸಮಾಜದಲ್ಲಿ ಇದರ ಪ್ರಭಾವ ಹೆಚ್ಚಾಗದಂತೆ ನಿಯಂತ್ರಣದಲ್ಲಿಡುವುದು ಇಲಾಖೆಯ ಜವಾಬ್ದಾರಿ. ಇತರ ದೇಶಗಳಲ್ಲಿ ಗಾಂಜಾ ಇನ್ನಿತರ ವಸ್ತುಗಳು ಕಾನೂನು ಬದ್ಧವಾಗಿವೆ. ನಮ್ಮ ದೇಶದಲ್ಲಿ ಇದರ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಇದರ ಜಾಲದಲ್ಲಿ ತೊಡಗಿ ಇದನ್ನೇ ವ್ಯಾಪಾರವಾಗಿ ಮಾಡಿ ಸಮಾಜಕ್ಕೆ ಕಂಟಕವಾಗಿರುವವರನ್ನು ಪತ್ತೆ ಹಚ್ಚುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆಯುತ್ತಲೆ ಇದೆ. ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಾದರೆ, ಮಾದಕ ವಸ್ತುವಿನ ಬಳಕೆ, ಮಾರಾಟ ಕ್ರಮೇಣವಾಗಿ ಕಡಿಮೆಯಾಗುತ್ತದೆ ಎಂದು ವರಿಷ್ಠಾಧಿಕಾರಿ ಹೇಳಿದರು. ಕೊಡಗಿನ ಜನತೆ, ಜನಪ್ರತಿನಿಧಿಗಳು ಶಿಸ್ತುಬದ್ಧ

ಕೊಡಗು ಜಿಲ್ಲೆಯ ಜನತೆ ಒಂದು ರೀತಿ ‘ಅಡ್ವಾನ್ಸ್÷್ಡ ಸೊಸೈಟಿ’ ಇದ್ದ ಹಾಗೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತಾರೆ. ಅದೇ ರೀತಿ ಯಾವುದೇ ಪಕ್ಷವಿರಲಿ ಅದರ ಜನಪ್ರತಿನಿಧಿಗಳು, ರಾಜಕೀಯ ಪ್ರಮುಖರ ಬಂಧನ ಹಾಗೂ ಅವರುಗಳ ಮೇಲಿನ ಮೊಕದ್ದಮೆ ವಿಚಾರಗಳಲ್ಲಿ ಪೊಲೀಸ್ ಇಲಾಖೆ ಮೇಲೆ ಪ್ರಭಾವ ಬೀರುವ ಕಾರ್ಯವನ್ನು ಮಾಡುವುದಿಲ್ಲ. ಇತರ ಜಿಲ್ಲೆಗಳಿಗೆ ಹೋಲಿಸದರೆ ಕೊಡಗು ಈ ನಿಟ್ಟಿನಲ್ಲಿ ಮಾದರಿಯಾಗಿದೆ. ಇಲ್ಲಿನ ಪೊಲೀಸ್ ಸಿಬ್ಬಂದಿ ಕೂಡ ವೃತ್ತಿಪರ ಕೆಲಸವನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕೊಡಗಿನ ಜನ, ವಾತಾವರಣವನ್ನು ಪ್ರಶಂಶಿಸಿದರು. ಹೊರರಾಜ್ಯದ ಕಾರ್ಮಿಕರು ಎಲ್ಲರೂ ಅಪರಾಧಿಗಳಲ್ಲ

ಭಾರತದಾದ್ಯಂತ ಯಾರೂ ಬೇಕಾದರೂ ಎಲ್ಲಿ ಬೇಕಾದರು ‘ರೈಟ್ ಟು ಲವ್’ ಆಧಾರದಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದು ಎಸ್.ಪಿ ರಾಮರಾಜನ್ ಅವರು ಹೇಳಿದರು. ಹೊರರಾಜ್ಯದ ಕಾರ್ಮಿಕರು, ಹೆಚ್ಚಾಗಿ ಅಸ್ಸಾಂ ರಾಜ್ಯದವರು ಕೊಡಗು ಜಿಲ್ಲೆಗೆ ಬರುತ್ತಿರುವುದು ಕೂಡ ಇದೇ ಆಧಾರದಲ್ಲಿ. ಹೆಚ್ಚಾಗಿ ಇವರುಗಳು ‘ಮ್ಯಾನ್‌ಪವರ್’ ಅಗತ್ಯವಿರುವ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಇವರುಗಳು ಇಲ್ಲಿ ಬರುವುದನ್ನು ತಡೆಯಲು ಅಸಾಧ್ಯ. ಇವರುಗಳ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆಯೇ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಲು ತೋಟದ ಮಾಲೀಕರೊಂದಿಗೆ ವ್ಯವಹರಿಸಲಾಗುತ್ತಿದೆ. ಅಸ್ಸಾಂ ಜನ ಬಂದ ನಂತರ ಜಿಲ್ಲೆಯಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ ಎಂಬ ಭಾವನೆ ಕೆಲವರಲ್ಲಿ ಮೂಡಿದ್ದು, ಇದು ತಪ್ಪು. ಇದುವರೆಗೆ ಪೊಲೀಸ್ ಇಲಾಖೆ ಬಲೆಗೆ ಬಿದ್ದಿರುವ ಅಸ್ಸಾಂ ರಾಜ್ಯ ಮೂಲದ ಅಪರಾಧಿಗಳು ಯಾರೂ ಕೂಡ ವ್ಯವಸ್ಥಿತವಾಗಿ ಇಲ್ಲಿ ಕಳ್ಳತನ ಮಾಡಲೆಂದೇ ಆಗಮಿಸಿಲ್ಲ. ಎಲ್ಲ ಸಮಾಜದಲ್ಲಿಯೂ ಅಪರಾಧಗಳು ಸಾಮಾನ್ಯ. ನಾವು ಈ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅಸ್ಸಾಂನವರು ಎಂದು ಹೇಳಿ ಬಾಂಗ್ಲಾದೇಶ ಅಥವಾ ಇತರ ದೇಶದವರು ಬಂದಿದ್ದಲ್ಲಿ ಅವರುಗಳ ಮೇಲೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯ ಎಂದರು.