ಗೋಣಿಕೊಪ್ಪಲು, ಅ. ೪: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ, ಶ್ರೀಮಂಗಲ ಭಾಗದಲ್ಲಿ ಹುಲಿ ಹಾವಳಿಯು ವಿಪರೀತ ವಾಗಿರುವುದರಿಂದ ಹುಲಿಯ ಸೆರೆಗೆ ತಕ್ಷಣವೇ ಅಗತ್ಯಕ್ರಮ ಕೈಗೊಳ್ಳಲು ಗ್ರಾಮಸ್ಥರು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರಿಗೆ ಮನವಿ ಮಾಡಿದರು.
ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದ ೩ ದಿನದಲ್ಲಿ ರೈತರ ೬ ಜಾನುವಾರುಗಳು ಮೃತಪಟ್ಟಿವೆ. ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಜನವಸತಿ ಪ್ರದೇಶದಲ್ಲಿ ಹುಲಿಯ ಸಂಚಾರ ಅವುಗಳ ಹೆಜ್ಜೆ ಗುರುತುಗಳಿಂದ ಕಂಡು ಬಂದಿದೆ. ರೈತರ ಕೊಟ್ಟಿಗೆಯಲ್ಲಿರುವ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಆಗಿಂದ್ದಾಗಿಯೇ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಲೇಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಟಿ. ಶೆಟ್ಟಿಗೇರಿ ಗ್ರಾಮದ ಕೊರಕೋಟು ಅಯ್ಯಪ್ಪ ದೇವಾಲಯದ ಅರ್ಚಕ ಸತ್ಯಮೂರ್ತಿ ಎಂಬವರ ಕೊಟ್ಟಿಗೆಯಲ್ಲಿದ್ದ ಹಸುವನ್ನು ಹುಲಿಯು ದಾಳಿ ನಡೆಸಿ ಕೊಂದು ಹಾಕಿದ ಹಿನ್ನಲೆಯಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು. ಜಾನುವಾರು ಕಳೆದುಕೊಂಡ ಶ್ರೀಮಂಗಲದ ಬಾದುಮಂಡ ಸುಬ್ರಮಣಿ ಹಾಗೂ ಅರ್ಚಕ ಸತ್ಯಮೂರ್ತಿ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದರು.
ಮುಂದಿನ ದಿನದಲ್ಲಿ ಹುಲಿಯು ಮಾನವನ ಮೇಲೆ ದಾಳಿ ನಡೆಸುವ ಸಂಭವ ಅಲ್ಲಗೆಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ತಕ್ಷಣವೇ ವಿಶೇಷ ಜಾಗೃತಿ ವಹಿಸಿ ಹುಲಿಯ ಸೆರೆಗೆ ಕ್ರಮ ಕೈಗೊಳ್ಳಬೇಕು, ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರ ನಿರ್ದೇಶನದ ಮೇರೆ ತುರ್ತಾಗಿ ವೀರಾಜಪೇಟೆಯ ಡಿಸಿಎಫ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಸೇರುವ ಮೂಲಕ ಹುಲಿಯ ಸೆರೆಗೆ ಬೇಕಾದ ಕ್ರಮಗಳನ್ನು ಶಾಸಕ ಪೊನ್ನಣ್ಣ ಅವರ ಸಲಹೆ ಮೂಲಕ ಕೈಗೆತ್ತಿಕೊಳ್ಳಲಾಗುವುದು.
ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿ ಸೆರೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಹಿರಿಯ ಅಧಿಕಾರಿಗಳ ಆದೇಶ ಜಾರಿಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕು ಎಂದು ಅವರು ಹೇಳಿದರು.
ಹುಲಿಯ ಸೆರೆಗೆ ಬೇಕಾದ ಸರ್ಕಾರದ ಅನುಮತಿಯನ್ನು ಶಾಸಕ ಪೊನ್ನಣ್ಣನವರು ಶೀಘ್ರದಲ್ಲಿಯೇ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ನಿರಂತರ ಹುಲಿ ಹಾವಳಿ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಜಾನುವಾರುಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಹುಲಿಯ ದಾಳಿಯಿಂದ ಮೃತಪಟ್ಟ ಜಾನುವಾರುಗಳಿಗೆ ಸಿಗುವ ಪರಿಹಾರ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಪ್ಪಚ್ಚಂಗಡ ಮೋಟಯ್ಯ ಗಮನ ಸೆಳೆದರು.
ಸಂಕೇತ್ ಪೂವಯ್ಯ ಭೇಟಿಯ ವೇಳೆ ಪೊನ್ನಂಪೇಟೆ ಅರಣ್ಯ ವಲಯದ ಆರ್ಎಫ್ಒ ಶಂಕರ್, ಕಾಂಗ್ರೆಸ್ ಪಕ್ಷದ ರಾಜ್ಯ ಒಬಿಸಿ ಉಪಾಧ್ಯಕ್ಷ ಬಾಲಕೃಷ್ಣ, ಗ್ಯಾರೆಂಟಿ ಯೋಜನೆಯ ತಾಲೂಕು ಸದಸ್ಯ ಪರ್ಮಾಲೆ ಗಣೇಶ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ತೀತಿರ ಪ್ರಭು, ಆಂಡಮಾಡ ಭರತ್, ಆಲೆಮಾಡ ಸೋಮಣ್ಣ, ಚೊಟ್ಟೆಯಂಡಮಾಡ ಉದಯ, ಮಚ್ಚಮಾಡ ಸಜನ್ ನಾಚಪ್ಪ, ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.