ಸೋಮವಾರಪೇಟೆ, ಅ. ೪: ಕಾನೂನು ಪಾಲನೆ ಪ್ರತಿ ಯೋರ್ವರ ಕರ್ತವ್ಯ. ಕಾನೂನನ್ನು ನಾವು ಪಾಲಿಸಿದರೆ ಕಾನೂನು ನಮ್ಮನ್ನು ಕಾಪಾಡುತ್ತದೆ. ಪೊಲೀಸ್ ಇಲಾಖೆ ತಾಂತ್ರಿಕವಾಗಿಯೂ ಮೇಲ್ದರ್ಜೆಗೇರಿದ್ದು, ದಿನದಿಂದ ದಿನಕ್ಕೆ ಕಾನೂನುಗಳು ಬದಲಾಗುತ್ತಿವೆ ಎಂದು ಡಿವೈಎಸ್ಪಿ ಗಂಗಾಧರಪ್ಪ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ, ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ಬೆರಳೆಣಿಕೆಯಷ್ಟು ಇರುವ ಕ್ರಿಮಿನಲ್ಗಳನ್ನು ಸಾವಿರಾರು ಸಂಖ್ಯೆಯಲ್ಲಿರುವ ಪ್ರಜ್ಞಾವಂತ ನಾಗರಿಕರು ಸಹಿಸಿಕೊಳ್ಳುತ್ತಿದ್ದಾರೆ. ಇದು ಬದಲಾಗಬೇಕು. ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಡಿವೈಎಸ್ಪಿ ತಿಳಿಸಿದರು.
ತಂತ್ರಜ್ಞಾನ ಮುಂದುವರೆದಿದ್ದು, ಪೊಲೀಸ್ ಇಲಾಖೆಯೂ ಸಹ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿದೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಕೊಡಗಿನಲ್ಲಿ ಕಾನೂನಿಗೆ ಗೌರವ ಕೊಡುವ ಮಂದಿ ಹೆಚ್ಚಿದ್ದಾರೆ. ಇಂತಹ ಸ್ಥಳದಲ್ಲಿ ಕೆಲಸ ಮಾಡಲು ಪೊಲೀಸರಿಗೂ ಹೆಮ್ಮೆಯಿದೆ. ಕೆಲವೊಮ್ಮೆ ಇಲಾಖೆಯಲ್ಲಿಯೂ ಸಣ್ಣಪುಟ್ಟ ವ್ಯತ್ಯಾಸಗಳಾಗುತ್ತವೆ. ಅವುಗಳನ್ನು ಸರಿಪಡಿಸಿಕೊಂಡು ಮುಂದುವರೆಯುತ್ತಿದ್ದೇವೆ. ಯಾವೊಬ್ಬ ಪೊಲೀಸರಿಂದಲೂ ತಪ್ಪುಗಳು ಆಗಬಾರದು ಎಂಬ ನಿಟ್ಟಿನಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಪೊಲೀಸರಿಗಾಗಿ ಹೆಲ್ಮೆಟ್ ಹಾಕಬೇಡಿ; ನೀವು ಮತ್ತು ನಿಮ್ಮ ಕುಟುಂಬದವರಿಗಾಗಿ ಹೆಲ್ಮೆಟ್ ಧರಿಸಿ. ದಾಖಲೆಗಳು ಇಲ್ಲದೇ ರಸ್ತೆಗಿಳಿಯುವ ವಾಹನಗಳು, ಬಟ್ಟೆ ತೊಡದ ಮನುಷ್ಯರು ರಸ್ತೆಗೆ ಬಂದAತೆ ಎಂದು ವ್ಯಾಖ್ಯಾನಿಸಿದ ಅವರು, ಸಾರ್ವಜನಿಕರು ಸಮರ್ಪಕ ದಾಖಲೆಗಳನ್ನು ಹೊಂದಿಕೊAಡು ವಾಹನ ಚಲಾಯಿಸಬೇಕೆಂದು ಕಿವಿಮಾತು ನುಡಿದರು.
ಸಾರ್ವಜನಿಕರು ಹಾಗೂ ಇಲಾಖೆಯಿಂದ ಸಿಗುವ ಸನ್ಮಾನಗಳು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿAದ ಪೊಲೀಸರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇತ್ತೀಚೆಗೆ ಪಟ್ಟಣ ಸಮೀಪದ ಕಿಬ್ಬೆಟ್ಟ ಗ್ರಾಮದ ರಸ್ತೆಯಲ್ಲಿ ನಡೆದ ದರೋಡೆ, ಕಾಗಡಿಕಟ್ಟೆ ಹಾಗೂ ಬಳಗುಂದ ಗ್ರಾಮದ ಮನೆ ದರೋಡೆ ಪ್ರಕರಣಗಳನ್ನು ಭೇದಿಸಿ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಿರುವ ಪೊಲೀಸರ ಕ್ರಮವನ್ನು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸಿ.ಬಿ. ಸುರೇಶ್ ಶೆಟ್ಟಿ ಶ್ಲಾಘಿಸಿ, ಸಂಘಟನೆಯ ವತಿಯಿಂದ ಸನ್ಮಾನಿಸಿದರು.
ಡಿವೈಎಸ್ಪಿ ಗಂಗಾಧರಪ್ಪ, ಇನ್ಸ್ಪೆಕ್ಟರ್ ಮುದ್ದು ಮಾದೇವ, ಠಾಣಾಧಿಕಾರಿಗಳಾದ ರವಿ, ಗೋಪಾಲ್, ಸಿಬ್ಬಂದಿಗಳಾದ ಸುಧೀಶ್, ಎಎಸ್ಐ ಕಾರ್ಯಪ್ಪ, ದಯಾನಂದ, ಅನಂತ್, ರಂಜಿತ್, ಮಲ್ಲೇಶ, ಲೋಕೇಶ್, ಪ್ರವೀಣ್, ಶರತ್ ಅವರುಗಳನ್ನು ಸನ್ಮಾನಿಸಲಾಯಿತು. ವಕೀಲ ಗಿರೀಶ್, ಉದ್ಯಮಿ ಕಾರ್ತಿಕ್, ಸಂಘಟನೆಯ ಕಾರ್ಯದರ್ಶಿ ರಫೀಕ್, ರಂಗಸ್ವಾಮಿ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.