*ಗೋಣಿಕೊಪ್ಪ, ಅ. ೩: ಶರಣರ ವ್ಯಕ್ತಿತ್ವ, ಸಾಧನೆಗಳ ಘನತೆಯನ್ನು ಬಿಂಬಿಸುವ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತು ಎಂದು ಸಾಹಿತಿ ಕಣಿವೆ ಭಾರಧ್ವಾಜ್ ಆನಂದ ತೀರ್ಥ ಹೇಳಿದರು.
ಕೊಡಗು ಜಿಲ್ಲೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಕದಳಿ ವೇದಿಕೆ, ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಯೋಗ ದಲ್ಲಿ ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ-ಕಾಲೇಜು ಹಂತದಿAದಲೇ ವಿದ್ಯಾರ್ಥಿಗಳು ವಚನ ಸಾಹಿತ್ಯದ ಅರಿವು ಮೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ತಿಳಿಸಿದರು.
ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ವಿಷಯದ ಕುರಿತು ಉಪನ್ಯಾಸ ನೀಡಿದ ವೀರಾಜಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ದಿಲನ್ ಮುತ್ತಣ್ಣ, ಶತ ಶತಮಾನಗಳ ಎಲ್ಲೆಯನ್ನು ಮೀರಿ ಎಷ್ಟೋ ಕಾಲದವರೆಗೂ ಜೀವಂತವಾಗಿ ಉಳಿಯಬಲ್ಲ ಸತ್ವ ವಚನಗಳಲ್ಲಿವೆ. ರಾಜಧರ್ಮ ಕ್ಷೀಣಿಸಿ ಪ್ರಜಾಧರ್ಮ ಜಾರಿಗೆ ಬಂದದ್ದು ವಚನಕಾರರ ಚಳವಳಿಯಿಂದ ಹನ್ನೆರಡನೇ ಶತಮಾನದಲ್ಲಿ ಮೌಢ್ಯಗಳು ಹಾಗೂ ಕಂದಾಚಾರಗಳ ಸುಳಿಯಲ್ಲಿ ಜನಸಾಮಾನ್ಯರನ್ನು ಸಿಲುಕಿದ್ದ ಸಂದರ್ಭ ದೇಹವನ್ನೇ ದೇವಾಲಯವಾಗಿಸಿದ ವಚನಕಾರರು ಅಮಾಯಕ ಶೋಷಿತ ಮಂದಿಯ ಬದುಕಿನಲ್ಲಿ ಬೆಳಕು ನೀಡಿದವರು ಎಂದು ವ್ಯಾಖ್ಯಾನಿಸಿದರು.
ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಸಮಿತಿ ಗೌರವ ಕಾರ್ಯದರ್ಶಿ ಬಿ. ನಟರಾಜು, ಕಾರ್ಯದರ್ಶಿ ಕೆ.ಪಿ. ಪರಮೇಶ್, ಜಿಲ್ಲಾ ನಿರ್ದೇಶಕ ಮೋಹನ್, ಪೊನ್ನಂಪೇಟೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜೆ.ಎಸ್. ಲೋಕೇಶ್, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ಶಾಲೆಯ ಮುಖ್ಯ ಶಿಕ್ಷಕಿ ಜಯಮ್ಮ, ನಿವೃತ್ತ ಶಿಕ್ಷಕಿ ಸುಬ್ಬಮ್ಮ, ಮಾಯಮುಡಿ ಗ್ರಾಮದ ನಿವಾಸಿಗಳಾದ ಸರೋಜ, ಲತಾ, ಅರ್ಪಿತಾ, ನೇತ್ರಾವತಿ ಇದ್ದರು. ಶಾಲಾ ಶಿಕ್ಷಕಿ ಎಂ.ಟಿ. ಸುಮಾ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.