ಸಿದ್ದಾಪುರ, ಅ. ೩: ಜಿಲ್ಲಾ ಕೃಷಿ ಇಲಾಖೆ ಹಾಗೂ ಓ.ಡಿ.ಪಿ. ಸಂಸ್ಥೆ ಸಹಭಾಗಿತ್ವದಲ್ಲಿ ರೈತ ಮಹಿಳೆಯರಿಗೆ ಒಂದು ದಿನದ ಕೃಷಿ ಚಟುವಟಿಕೆಗಳ ತರಬೇತಿ ಶಿಬಿರವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಂತರ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕ ಡಾ. ದೇವರಾಜ್ ಮಾತನಾಡಿ, ಜಿಲ್ಲೆಯಾದ್ಯಂತ ಪೌಷ್ಟಿಕ ಕೃಷಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ರೈತ ಮಹಿಳೆಯರು ತಮ್ಮ ಕೈತೋಟದಲ್ಲಿ ಪೌಷ್ಟಿಕವಾಗಿ ತಾಜಾ ತರಕಾರಿ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಸ್ವರ್ಣ ಮಾತನಾಡಿ, ಆಧುನಿಕ ಕೃಷಿ ಪದ್ಧತಿ ಬೇಸಾಯ ಹೊಸ ತಳಿಗಳ ಬಗ್ಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿAದ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತಿದ್ದು, ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ತೋಟಗಾರಿಕೆ ವಿಸ್ತರಣೆ ವಿಭಾಗದ ಲತಾ ಮಾತನಾಡಿ, ಬೆಳೆಗಳಿಗೆ ಬರುವ ರೋಗಗಳು, ಕೀಟನಾಶಕ ಹಾಗೂ ಆರ್ಥಿಕ ಬೆಳೆಗಳಾಗಿ ಆರ್ಥಿಕ ಹೂವಿನ ಉತ್ಪನ್ನಗಳ ಮತ್ತು ಅದರ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು. ಓ.ಡಿ.ಪಿ. ಸಂಸ್ಥೆಯ ಜಿಲ್ಲಾ ಸಂಚಾಲಕಿ ಜಾಯ್ಸ್ ಮೆನೇಜಸ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಪಶು ಸಂಗೋಪನೆ, ಸ್ವ-ಉದ್ಯೋಗಗಳ ಕುರಿತು ತರಬೇತಿ ಮತ್ತು ಸಾಮಗ್ರಿಗಳನ್ನು ನೀಡುತ್ತಿದ್ದು, ಮಹಿಳೆಯರು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಮುಖ್ಯ ವಾಹಿನಿಗೆ ಬರಬೇಕೆಂದರು.

ಈ ಸಂದರ್ಭ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ಮಾಲ್ದಾರೆ ಆರೋಗ್ಯ ಇಲಾಖೆಯ ಡಾ. ಚೈತನ್ಯ, ಪ್ರಮುಖರಾದ ಪ್ರಮೀಳಾ, ದೇವಜಾನು, ಧನುಕುಮಾರ್, ರೀಟಾ, ಸುಪ್ರೀತಾ ಸೇರಿದಂತೆ ಓ.ಡಿ.ಪಿ. ಸಂಸ್ಥೆಯ ಪ್ರಮುಖರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.