ಶನಿವಾರಸಂತೆ, ಸೆ. ೨೯: ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಕಾಲೇಜು ಹಾಗೂ ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ೨೦೨೪-೨೫ನೇ ಸಾಲಿನ ಸೋಮವಾರಪೇಟೆ-ಕುಶಾಲನಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಕ್ರೀಡಾ ಮೈದಾನದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕೆಲ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ೨೧ ಪದವಿಪೂರ್ವ ಕಾಲೇಜುಗಳ ಬಾಲಕರ ತಂಡಗಳು ಹಾಗೂ ೫ ಪದವಿಪೂರ್ವ ಕಾಲೇಜುಗಳ ಬಾಲಕಿಯರ ತಂಡಗಳು ವಾಲಿಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಿದ್ದವು.
ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಹೆಬ್ಬಾಲೆ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಹಾಗೂ ಕುಶಾಲನಗರ ಕನ್ನಡ ಭಾರತಿ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡವು.
ಬಾಲಕಿಯರ ವಿಭಾಗದಲ್ಲಿ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಹಾಗೂ ಸೋಮವಾರಪೇಟೆ ಸೇಂಟ್ ಜೋಸೆಫ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡವು. ಕ್ರೀಡಾಕೂಟವು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಸ್. ಗಿರೀಶ್, ರಾಜೇಶ್ ಹಾಗೂ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.