ಕಣಿವೆ, ಸೆ. ೨೯: ಹಿಂದೂ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಜಾಗೃತಿ ಹಾಗೂ ತಿಳುವಳಿಕೆ ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ತಾಯಂದಿರು ತಮ್ಮ ತಮ್ಮ ಹೆಣ್ಣುಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ್ ಕರೆ ನೀಡಿದರು.

ಕುಶಾಲನಗರದ ಎಸ್.ಎನ್.ಡಿ.ಪಿ ಸಮಿತಿ ವತಿಯಿಂದ ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಧರ್ಮ ಪರಿಪಾಲಕ ನಾರಾಯಣ ಗುರುಗಳ ೧೭೦ ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನದಿAದಾಗಿ ಸನಾತನ ಹಿಂದೂ ಧರ್ಮ ಅವನತಿಯತ್ತ ಸಾಗಿದೆ.ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ನಮ್ಮ ಧರ್ಮದ ಸಂಸ್ಕೃತಿ ಸಂಪ್ರದಾಯಗಳ ಪರಿಪಾಲನೆ ಇಂದು ಅತೀ ಅವಶ್ಯವಾಗಿದೆ ಎಂದು ವಿಜಯ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೆಲ್ಲಿಹುದಿಕೇರಿ ಜಿ.ಪಂ. ಮಾಜಿ ಸದಸ್ಯೆ ಸುನೀತಾ ಮಂಜುನಾಥ್, ನಾರಾಯಣ ಗುರುಗಳು ಸಮಾಜಕ್ಕೆ ನೀಡಿರುವ ಸಂದೇಶಗಳ ಪಾಲನೆ ಮಾಡುವ ಮೂಲಕ ಸಾರ್ಥಕವಾದ ಜೀವನವನ್ನು ನಡೆಸಬಹುದಾಗಿದೆ. ಮೊಬೈಲ್ ಬಳಕೆಯ ಅತಿಯಾದ ಬಳಕೆಯಿಂದಾಗಿ ಈ ಮಣ್ಣಿನ ಗುಣ ಧರ್ಮ ಸಂಪ್ರದಾಯಗಳು ಮರೆಯಾಗುತ್ತಿವೆ. ಹಾಗಾಗಿ ಕುಶಾಲನಗರ ಎಸ್.ಎನ್.ಡಿ.ಪಿ ಸಂಸ್ಥೆಯನ್ನು ಬಲಪಡಿಸಿ ಅದರ ವತಿಯಿಂದ ಸಮಾಜದ ಮಂದಿಗೆ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆ ಬಲವರ್ಧನೆಯಾಗಬೇಕಿದೆ ಎಂದರು.

ಎಸ್.ಎನ್.ಡಿ.ಪಿಯ ಪ್ರಾದೇಶಿಕ ಮುಖಂಡರೂ ಆದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಜಿ.ಲೋಕೇಶ್ ಮಾತನಾಡಿ, ಮಕ್ಕಳಿಗೆ ಉತ್ತಮವಾದ ಹಾಗೂ ಉನ್ನತವಾದ ವಿದ್ಯಾಭ್ಯಾಸ ಕೊಡಿಸುವ ಮೂಲಕ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೋಷಕರು ಶ್ರಮಿಸಬೇಕಿದೆ ಎಂದರು.

ಕುಶಾಲನಗರ ವಲಯ ಎಸ್.ಎನ್.ಡಿ.ಪಿ ವಲಯ ಅಧ್ಯಕ್ಷ ಕೆ.ಟಿ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಅಧ್ಯಕ್ಷ ಪಿ.ರವೀಂದ್ರನ್, ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ನಿರ್ದೇಶಕ ಟಿ.ಕೆ.ಸುಧೀರ್, ಮಡಿಕೇರಿ ತಾಲೂಕು ಅಧ್ಯಕ್ಷ ಟಿ.ಆರ್. ವಾಸುದೇವ್, ಬಾಲಕೃಷ್ಣ, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ, ಎಸ್.ಎನ್.ಡಿ.ಪಿ ಕುಶಾಲನಗರ ಘಟಕದ ಅಧ್ಯಕ್ಷೆ ಸವಿತಾ, ಪ್ರಮುಖರಾದ ಉದಯಕುಮಾರ್, ರಾಬಿನ್ ರಾಜೇಂದ್ರನ್, ಅನೀಶ್, ಎನ್.ಸಿ. ಡಾಲು ಇದ್ದರು. ಇದೇ ಸಂದರ್ಭ ಎಸ್.ಎನ್.ಡಿ.ಪಿ ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾ ವಿಜೇತರಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು ಇದ್ದರು.