ಶನಿವಾರಸಂತೆ, ಸೆ. ೨೪: ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ವತಿಯಿಂದ ದಲಿತ ಸಂಘರ್ಷ ಸಮಿತಿಯ ೫೦ನೇ ವರ್ಷದ ಅಂಗವಾಗಿ ಸಾಮಾಜಿಕ ಐಕ್ಯತೆಗಾಗಿ ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ ನಡೆಯಿತು.
ನಿವೃತ್ತ ಐಜಿಪಿ ಕೆ. ಆರ್ಕೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆಯಿಂದ ಕೆಳವರ್ಗದವರು ಅನೇಕ ನೋವು ಅನುಭವಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ನರಳಾಡಿದ್ದಾರೆ. ಮೂಲಭೂತ ಸೌಕರ್ಯ, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜಾತಿ ವ್ಯವಸ್ಥೆ ದೂರ ಮಾಡಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗಿದ್ದು ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನವಾಗಿದೆ. ಭಾರತೀಯ ಸಂವಿಧಾನ ಇಲ್ಲದಿದ್ದರೆ ಸಮಾನತೆ ಸಮಾಜ ನಿರ್ಮಾಣವಾಗುತ್ತಿರಲಿಲ್ಲ ಎಂದು ವ್ಯಾಖ್ಯಾನಿಸಿದರು.
ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಸಮಾಜದಲ್ಲಿ ಜಾತಿ ತಾರತಮ್ಯ ದೂರವಾಗಬೇಕು. ಕರ್ಮ ಸಿದ್ಧಾಂತ ಹಾಗೂ ಕಾಯಕ ಸಿದ್ಧಾಂತ ಎರಡೂ ಒಂದೆಯಾಗಿದ್ದು, ಶಿಕ್ಷಣದಿಂದ ತಮ್ಮ ಸ್ಥಾನಮಾನ ಬದಲಾಯಿಸಿಕೊಂಡು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು. ಧರ್ಮಗುರು ಶಫಿ ಸಅದಿ ಮಾತನಾಡಿ, ಸೌಹರ್ದತೆ, ಸಾಮರಸ್ಯದ ನಾಡು ಭಾರತವಾಗಿದೆ. ಜಾತ್ಯತೀತ ಭಾವನೆಯ ಅಡಿಗಲ್ಲಿನ ಮೇಲೆ ಶಾಂತಿ ನೆಲೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಜೆ.ಎಲ್. ಜನಾರ್ಧನ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಮಾನವತ ಸಂದೇಶ ಸಾರುವ ಉದ್ದೇಶದಿಂದ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾನವರ ಮನಸ್ಸುಗಳನ್ನು ಒಂದುಗೂಡಿಸುವ ವೇದಿಕೆ ಮಾನವ ಬಂಧುತ್ವ ವೇದಿಕೆಯಾಗಿದೆ ಎಂದರು.
ದ.ಸಂ. ಸಂಘಟನೆ ಜಿಲ್ಲಾ ಸಂಚಾಲಕ ಎಂ.ಎಸ್. ವೀರೇಂದ್ರ ಪ್ರಾಸ್ತಾವಿಕ ನುಡಿಯಾಡಿದರು. ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಆಶಯ ನುಡಿಗಳನ್ನಾಡಿದರು. ರಾಜ್ಯ ಸಂಘಟನಾ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಮಾನವ ಬಂಧುತ್ವ ವೇದಿಕೆ ಮಂಗಳೂರು ವಿಭಾಗೀಯ ಸಂಚಾಲಕ ಸತೀಶ್, ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್, ದಲಿತ ಮುಖಂಡ ಹಾನಗಲ್ ಜಯಪ್ಪ, ಉಪ ತಹಶೀಲ್ದಾರ್ ಮಧುಸೂದನ್, ಪ್ರಮುಖರಾದ ಹೆಚ್.ಬಿ. ಜಯಪ್ಪ, ಅಬ್ಬಾಸ್, ಪ್ರೇಮಾ ವಸಂತ್, ಶಿವಾನಂದ್, ಪಾರ್ವತಿ, ಡಿ.ಪಿ. ಸತೀಶ್, ಯೋಗೇಂದ್ರ, ಕಿರಣ್ ಕುಮಾರ್, ಹೆಚ್.ಕೆ. ಜಗದೀಶ್, ಇತರರು ಹಾಜರಿದ್ದರು.
ಉಪನ್ಯಾಸಕ ಯೋಗೇಂದ್ರ ಪ್ರಾರ್ಥಿಸಿ, ಹೆಚ್.ಕೆ. ಜಗದೀಶ್ ಸ್ವಾಗತಿಸಿದರು. ಶಿಕ್ಷಕರಾದ ಸತೀಶ್ ಹಾಗೂ ಕಿರಣ್ ಕುಮಾರ್ ನಿರೂಪಿಸಿ, ವಂದಿಸಿದರು.