ನಾಪೋಕ್ಲು, ಸೆ. ೨೪: ಬೆಂಗಳೂರಿನ ಕೊಡಗು ಗೌಡ ಸಮಾಜದ ಪ್ರಾಯೋಜಕತ್ವದಲ್ಲಿ ಓಜಶ್ವಿ ಫೌಂಡೇಶನ್ ವತಿಯಿಂದ ಚೇರಂಬಾಣೆ ಅರುಣಾ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಮಾರ್ಗದರ್ಶನ ಶಿಬಿರ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಿ.ಐ.ಟಿ. ಪೊನ್ನಂಪೇಟೆ ಉಪನ್ಯಾಸಕಿ ಕವಿತಾ ಪಾಲ್ಗೊಂಡು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಯ ಪಾಲನೆ, ಶಿಸ್ತು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ನಂತರ ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅರುಣ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಡಿ.ಎಸ್. ರಾಮಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಸೆಟ್ಟೆಜನ ಬ್ರಿಜೇಶ್, ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಚನ್ನಬಸಪ್ಪ, ದಾಮೋದರ್ ನಾಯಕ್ ಮತ್ತು ಶಿಕ್ಷಕರಾದ ಪರಮೇಶ್, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.