ಮಡಿಕೇರಿ, ಸೆ. ೧೯: ಲೈನ್ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಅಪ್ರಾಪ್ತೆಯನ್ನು ಅಪಹರಣ ಮಾಡಿದ್ದ ಪ್ರಕರಣದ ಆರೋಪಿಗೆ ದಂಡ ಸಹಿತ ೫ ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಅಸ್ಸಾಂ ಮೂಲದ ಸುರಜ್ ಅಲಿಯಾಸ್ ಸುರಸ್ ಅಲಿ (೨೩) ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮತ್ತಿಕಾಡು ಗ್ರಾಮದ ಅತ್ತೂರು-ನಲ್ಲೂರು ಎಸ್ಟೇಟ್ವೊಂದರ ಲೈನ್ಮನೆಯಲ್ಲಿ ವಾಸವಿದ್ದ ಅಪ್ರಾಪ್ತೆಯನ್ನು ಅದೇ ಲೈನ್ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಸುರಜ್ ಅಪಹರಣ ಮಾಡಿದ ಕುರಿತು ತಾ. ೯-೮-೨೦೨೧ ರಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಐಪಿಸಿ ೩೬೩, ೩೦೩, ಪೋಕ್ಸೊ ಕಾಯ್ದೆ, ಎಸ್.ಸಿ., ಎಸ್.ಟಿ. ದೌರ್ಜನ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ೧೧-೮-೨೦೨೧ ರಂದು ಆರೋಪಿಯನ್ನು ಬಂಧಿಸಲಾಗಿತ್ತು.
ತನಿಖಾಧಿಕಾರಿ ಹೆಚ್.ಎಂ. ಶೈಲೇಂದ್ರ ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ೨೯-೦೯-೨೦೨೧ ರಂದು ಮಡಿಕೇರಿಯ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಆರೋಪಿಗೆ ವಿವಿಧ ಪ್ರಕರಣಗಳಡಿ ಒಟ್ಟು ೫ ವರ್ಷ ಜೈಲು ಶಿಕ್ಷೆ, ರೂ. ೫ ಸಾವಿರ ದಂಡ, ತಪ್ಪಿದ್ದಲ್ಲಿ ೬ ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಘೋಷಿಸಿದ್ದಾರೆ. ಆರೋಪಿ ವಿರುದ್ಧ ಸರಕಾರಿ ಅಭಿಯೋಜಕರಾದ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.