ಶನಿವಾರಸಂತೆ, ಸೆ. ೧೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯಾವತಿ ದೇವರಾಜ್ ಹಾಗೂ ಸದಸ್ಯ ಡಿ.ಪಿ.ಬೋಜಪ್ಪ ಕಾರ್ಯಾಗಾರ ಉದ್ಘಾಟಿಸಿದರು.

ತರಬೇತುದಾರ ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ದಿಲೀಪ್ ಮಾತನಾಡಿ, ಅರಿವು ಕೇಂದ್ರದಲ್ಲಿ ದೊರೆಯುವ ಲ್ಯಾಪ್‌ಟಾಪ್, ಮಾನಿಟರ್, ಮೊಬೈಲ್‌ಗಳು ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯಲು ಉಪಯೋಗವಾಗುತ್ತದೆ ಎಂದು ತಿಳಿಸಿದರು. ಅಲ್ಲದೇ ಡಿಜಿಟಲ್ ಸಾಕ್ಷರತೆಯ ತರಬೇತಿಯಿಂದ ಮಹಿಳೆಯರಿಗೂ ಬಹಳ ಉಪಯೋಗವಿದೆ. ಡಿಜಿಟಲ್ ಡಿವೈಸ್‌ಗಳ ಮೂಲಕ ಹಣದ ವ್ಯವಹಾರ ಮಾಡುವುದನ್ನು ತಿಳಿಸಿ ಡಿಜಿಟಲ್ ಸಾಕ್ಷರತೆಯ ಮಹತ್ವದ ಅರಿವು ಮೂಡಿಸಿದರು.

ಗ್ರಂಥಾಲಯ ಮೇಲ್ವಿಚಾರಕಿ ಎಸ್.ಪಿ. ದಿವ್ಯಾ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ಜಲಜಾಕ್ಷಿ, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರು, ಎಂಬಿಕೆ ಯ ರೂಪಾ, ಪ್ರಮುಖ ದಿಲೀಪ್, ಇತರರು ಹಾಜರಿದ್ದರು. ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.