ಚೆಯ್ಯಂಡಾಣೆ, ಸೆ. ೧೮: ಕೊಡಗಿನ ಅನಿವಾಸಿ ಸಂಘಟನೆ ಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯಿಂದ ತಾ. ೨೨ರಂದು ದುಬೈಯ ದೇರದಲ್ಲಿರುವ ವಿಂಡಮ್ ಹೊಟೇಲ್ ಸಭಾಂಗಣದಲ್ಲಿ ಬೃಹತ್ ಮಿಲಾದ್ ಸಮಾವೇಶ ನಡೆಯಲಿದೆ.
ದುಬೈಯಲ್ಲಿನ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಾರ್ಯಕ್ರಮದ ಮುಖ್ಯ ಸಂಯೋಜಕ ಇಸ್ಮಾಯಿಲ್ ಮೂರ್ನಾಡು ಅಂದು ಸಂಜೆ ೪ ಗಂಟೆಯಿAದ ೧೧.೩೦ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ವಹಿಸಲಿದ್ದಾರೆ. ಕಾರ್ಯಕ್ರಮದ ನೇತೃತ್ವವನ್ನು ಬದರುಸ್ಸಾದತ್ ಸಯ್ಯದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ವಹಿಸಲಿದ್ದಾರೆ. ವಾಗ್ಮಿ ಹಂಸ ಮಿಸ್ವಾಹಿ ಓಟಪಡವು ಹುಬ್ಬುರಸೂಲ್ ಮುಖ್ಯಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಮಾಜ ಸೇವಕರಾದ ಇಮ್ರಾನ್ ಸಿದ್ದಿಕ್ ಹಾಗು ಹಲವಾರು ಉಲಮಾ, ಉಮರ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಮಕ್ಕಳ ಕಲಾ ಕಾರ್ಯಕ್ರಮ, ಮೌಲುದ್,ಬುರ್ದಾ ಮಜ್ಲಿಸ್,ದಫ್ ಪ್ರದರ್ಶನ, ಮಹಿಳೆಯರಿಗೆ ಪ್ರಬಂಧ, ಕ್ಯಾಲಿಗ್ರಫಿ, ಪ್ರಾರ್ಥನ ಸಂಗಮ ಹಾಗೂ ಅನ್ನದಾನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಹಮೀದ್ ನಾಪೋಕ್ಲು, ಕನ್ವಿನರ್ ಶಫೀಕ್ ಹಿಶಾಮಿ, ಕೋಶಾಧಿಕಾರಿ ರಫೀಕ್ ಗುಂಡಿಕೆರೆ, ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಜುಬೈರ್ ಎಮ್ಮೆಮಾಡು, ಕಾರ್ಯದರ್ಶಿ ಮುಜೀಬ್ ಕಡಂಗ ಹಾಗೂ ನಿಝಾರ್ ಗುಂಡಿಕೆರೆ ಉಪಾಧ್ಯಕ್ಷರಾದ ರಫೀಕ್ ಹಾಜಿ ಗುಂಡಿಕೆರೆ ಹಾಗೂ ಅಶ್ರಫ್ ಕುಂಜಿಲ ಇದ್ದರು.