ಮಡಿಕೇರಿ, ಸೆ. ೧೪: ಮಡಿಕೇರಿ ನಗರಸಭೆ ವತಿಯಿಂದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ಗಳ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭವನ್ನು ನಗರಸಭಾ ಚುನಾಯಿತ ಪ್ರತಿನಿಧಿಗಳು ಮತ್ತು ಇಂಜಿನಿಯರ್ಗಳು ಒಟ್ಟಾಗಿ ಉದ್ಘಾಟಿಸಿದರು. ಬಳಿಕ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.
ಈ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ನಗರಸಭಾ ನಿರ್ಗಮಿತ ಅಧ್ಯಕ್ಷೆ ಅನಿತಾ ಪೂವಯ್ಯ, ಭಾರತದಾದ್ಯಂತ ಪ್ರವಾಸ ಮಾಡಿ ಮೈಸೂರು ಪ್ರಾಂತ್ಯಕ್ಕೆ ಅತ್ಯುತ್ತಮ ಯೋಜನೆಗಳನ್ನು ರೂಪಿಸಿಕೊಟ್ಟ ಸರ್ ಎಂ.ವಿಶ್ವೇಶ್ವರಯ್ಯ ಅವರು ಆಗಿನ ಕಾಲದಲ್ಲಿ ಸಂಸ್ಥಾನಕ್ಕೆ ಕಿರೀಟ ಪ್ರಾಯರಾಗಿದ್ದರು ಎಂದರು. ವಿಶ್ವೇಶ್ವರಯ್ಯ ಎಂದಾಕ್ಷಣ ನೆನಪಾಗುವುದೇ ಕನ್ನಂಬಾಡಿ ಅಣೆಕಟ್ಟೆ. ಯಾವುದೇ ಕೆಲಸವನ್ನು ಕೀಳು ಎಂದು ಭಾವಿಸದೆ ಶ್ರದ್ಧೆಯಿಂದ ಮಾಡಲು ಕಲಿಸಿಕೊಟ್ಟವರು ಸರ್ ಎಂ.ವಿ. ಎಂದು ಅನಿತಾ ಹೇಳಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ಮಾತನಾಡಿ, ವಿಶ್ವೇಶ್ವರಯ್ಯ ಅವರು ಕೆಲಸದಲ್ಲಿ ತೋರಿದ ಶ್ರದ್ಧೆ ಅಗಾಧವಾದುದು. ನಾಗರಿಕರಿಗೆ ಮೂಲಭೂತ ಸೌಲಭ್ಯ ನೀಡುವಲ್ಲೂ ಆಡಳಿತ ವ್ಯವಸ್ಥೆಗೆ ಇದೇ ಶ್ರದ್ಧೆ ಇರಬೇಕೆಂದರು. ವಿಶ್ವೇಶ್ವರಯ್ಯ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಕ್ರಾಂತಿಯೇ ಆಯಿತು ಎಂದು ಹೇಳಿದರು.
ನಗರಸಭಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿಕುಮಾರ್, ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಹೇಮಂತ್ ಹೇಳಿದರು. ಸಹಾಯಕ ಎಕ್ಷಿಕ್ಯೂಟಿವ್ ಇಂಜಿನಿಯರ್ ಸೌಮ್ಯ ಮಾತನಾಡಿದರು.
ಇದೇ ವೇಳೆ ಸಮಾರಂಭದಲ್ಲಿ ಇಂಜಿನಿಯರ್ಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದÀ ರಾಜೇಶ್ ಯಲ್ಲಪ್ಪ, ಕೆ.ಎಂ. ಅಪ್ಪಣ್ಣ, ಮಹೇಶ್ ಜೈನಿ, ಅರುಣ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.