ಸುAಟಿಕೊಪ್ಪ, ಸೆ. ೧೩: ಕೋಮು ಸೌಹಾರ್ದ ಸಾಮರಸ್ಯಕ್ಕೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕುಶಾಲನಗರ ವಿಭಾಗದ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಕರೆ ನೀಡಿದರು.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಹಬ್ಬವನ್ನು ಮುಂಜಾಗ್ರತಾ ಕ್ರಮದೊಂದಿಗೆ ಆಚರಿಸಬೇಕು. ಮೆರವಣಿಗೆಯ ನಂತರ ಕೆಲವು ಯುವಕರು ಮತ್ತು ಇತರರು ತಮ್ಮ ವಾಹನಗಳನ್ನು ಚಲಾಯಿಸುವಾಗ ವೇಗದ ಮೀತಿ ಹಾಕಿಕೊಳ್ಳಬೇಕು. ಮೆರವಣಿಗೆ ಸಂದರ್ಭ ಘೋಷಣೆಗಳನ್ನು ಕೂಗುವಾಗ ಸಂಯಮವನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಂದು ಹಂತದಲ್ಲಿ ಜನಾಂಗದ ಮುಖಂಡರು, ಮಸೀದಿಗಳ ಮುಖ್ಯಸ್ಥರು ಮತ್ತು ಸ್ವಯಂ ಸೇವಕರು ಹೆಚ್ಚು ಮುತುವರ್ಜಿಯಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಎಚ್ಚರಿಕೆ ವಹಿಸುವಂತೆ ಕರೆ ನೀಡಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ ಮಾತನಾಡಿ, ಸಾಲು ಸಾಲು ರಜೆಗಳಿರುವ ಹಿನ್ನೆಲೆ ಮೆರವಣಿಗೆ ನಡೆಸುವ ಸಂದರ್ಭ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು. ೭ನೇ ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆ, ಗರಗಂದೂರು, ಹೊಸತೋಟ, ಸುಂಟಿಕೊಪ್ಪ ಭಾಗಗಳಿಂದ ಮಸೀದಿಗಳ ಪ್ರಮುಖರು ಹಾಗೂ ಜಮಾಯತ್ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.