ಸಿದ್ದಾಪುರ, ಸೆ. ೧೩: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಅರಣ್ಯ ಇಲಾಖೆ ಕೈಗೊಂಡಿತು. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬೈರಂಬಾಡ, ಹಾಲುಗುಂದ ಗ್ರಾಮದ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದ ಆನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಒತ್ತಾಯಿಸಿದ್ದ ಹಿನ್ನೆಲೆ ವೀರಾಜಪೇಟೆ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಗ್ಗಿನಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಸಿದರು. ಮಳೆಯಿಂದಾಗಿ ಕಾಫಿ ತೋಟದೊಳಗೆ ಕೆಸರಿನ ನಡುವೆ ಕಾರ್ಯಾಚರಣೆ ತಂಡವು ಕಾಡಾನೆಗಳನ್ನು ಕಾಡಿಗಟ್ಟಲು ಅವಿರತ ಶ್ರಮವಹಿಸಿತು. ಆದರೆ, ಕಾಡಾನೆಗಳು ಕಾರ್ಯಾಚರಣೆ ತಂಡವನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸುತ್ತಾಡಿಸಿದವು. ಕಾರ್ಯಾಚರಣೆ ಸಂದರ್ಭ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಕಾಡಿಗೆ ತೆರಳಲು ಹಿಂದೇಟು ಹಾಕಿದವು ಎಂದು ಸಿಬ್ಬಂದಿಗಳು ತಿಳಿಸಿದರು.
ಆದರೂ ಶ್ರಮವಹಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸುವಲ್ಲಿ ತಂಡ ಯಶಸ್ವಿಯಾಯಿತು. ಆದರೆ ಗುಂಪಿನಲ್ಲಿದ್ದ ಕಾಡಾನೆಗಳು ಬೇರ್ಪಟ್ಟು ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಉಳಿದುಕೊಂಡಿವೆ. ಕಾರ್ಯಾಚರಣೆ ಸಂದರ್ಭ ೪ ಕಾಡಾನೆಗಳು ಕಂಡುಬAದವು ಎಂದು ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ತಿಳಿಸಿದ್ದಾರೆ. ಹಚ್ಚಿನಾಡು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಆ ಭಾಗದ ಅರಣ್ಯಕ್ಕೆ ತೆರಳದೆ ಕಾಫಿ ತೋಟದೊಳಗೆ ಸುತ್ತಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಚ್ಚಿನಾಡು ಭಾಗದಲ್ಲಿ ಗೌರಿ ಗಣೇಶ ವಿಸರ್ಜನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ಭಾಗಕ್ಕೆ ತೆರಳಿದ್ದ ಕಾಡಾನೆಗಳು ವಾದ್ಯಗೋಷ್ಠಿಯ ಶಬ್ದಕ್ಕೆ ಕಾಡಿಗೆ ತೆರಳಲು ಹಿಂದೇಟು ಹಾಕಿದವು. ಇದರಿಂದಾಗಿ ಶನಿವಾರ ದಂದು ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಎಸಿಎಫ್ ಗೋಪಾಲ್ ಎ.ಪಿ. ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳು, ಆರ್ಆರ್ಟಿ ಮತ್ತು ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು. - ವರದಿ : ವಾಸು