ಶನಿವಾರಸಂತೆ, ಸೆ. ೧೨: ಪಟ್ಟಣದ ಕಾವೇರಿ ರಸ್ತೆ ಬದಿಯ ತ್ಯಾಜ್ಯ ಸಮಸ್ಯೆಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಮುಕ್ತಿ ನೀಡುವ ಕಾರ್ಯ ಮಾಡಿ ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪಟ್ಟಣದ ಮುಖ್ಯರಸ್ತೆಗೆ ಸಮಾನಾಂತರವಾಗಿ ಇರುವ ಕಾವೇರಿ ರಸ್ತೆ ತ್ಯಾಜ್ಯ ವಿಲೇವಾರಿ ರಸ್ತೆಯಾಗಿ ಪರಿವರ್ತಿತವಾಗಿತ್ತು. ಈ ರಸ್ತೆಯ ಬಲ ಬದಿ ಶನಿವಾರಸಂತೆ ಮತ್ತು ಎಡ ಬದಿ ದುಂಡಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುತ್ತದೆ. ಬಿದರೂರು ಗ್ರಾಮದಿಂದ ಆರಂಭವಾಗಿ ಯಶಸ್ವಿ ಥಿಯೇಟರ್‌ವರೆಗೆ ಇರುವ ೧ ಕಿ.ಮೀ. ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ಹಾಗೂ ಮಕ್ಕಳ ಕಟ್ಟೆಕೆರೆಯ ಮುಂಭಾಗ ಕಸದ ರಾಶಿ ರಾರಾಜಿಸುತ್ತಾ ಕೊಳೆತು ನಾರುತ್ತಿತ್ತು. ಕಾವೇರಿ ಪದವಿ ಪೂರ್ವ ಕಾಲೇಜಿನ ಮುಂಭಾಗದ ರಸ್ತೆ ಬದಿಯಲ್ಲೂ ಕಸ ತಂದು ಸುರಿಯಲಾಗುತ್ತಿತ್ತು. ರಸ್ತೆ ಬದಿಯ ಕೆಲವು ಮನೆಗಳ ಸದಸ್ಯರು, ನಿತ್ಯ ವಾಯು ವಿಹಾರಕ್ಕೆ ತೆರಳುವವರೇ ಕಸ ತಂದು ಹಾಕುತ್ತಿದ್ದಾರೆ ಎಂದು ಪತ್ತೆಹಚ್ಚಲಾಯಿತು.

ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಿವಿಧ ಇಲಾಖೆಗಳ ಉದ್ಯೋಗಸ್ಥರು, ೨ ಪಂಚಾಯಿತಿಗಳು ತ್ಯಾಜ್ಯ ಹಾಕುವವರನ್ನು ಗುರುತಿಸಿ, ಕಾನೂನು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದರು.

ಇದೀಗ ಆಗ್ರಹಕ್ಕೆ ಮಣಿದು ಸ್ಪಂದಿಸಿದ ದುಂಡಳ್ಳಿ ಗ್ರಾಮ ಪಂಚಾಯಿತಿ, ರಸ್ತೆಯ ಎರಡೂ ಬದಿಗಳ ತ್ಯಾಜ್ಯ ರಾಶಿ ತೆರವಿಗೆ ಮುಂದಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಲತೀಫ್ ಅವರ ಮಾರ್ಗದರ್ಶನದಲ್ಲಿ ಅಧ್ಯಕ್ಷೆ ಸತ್ಯವತಿ ಹಾಗೂ ಬಿದರೂರು ವಾರ್ಡ್ ನ ಸದಸ್ಯರ ಉಸ್ತುವಾರಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಹಾಕಲಾಗಿದ್ದ ತ್ಯಾಜ್ಯ ರಾಶಿಗಳನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು. ಬಿದ್ದಿದ್ದ ವಿದ್ಯುತ್ ಕಂಬಗಳನ್ನು, ಮರಗಳನ್ನು ತೆರವುಗೊಳಿಸುತ್ತಾ ತ್ಯಾಜ್ಯವನ್ನೆಲ್ಲಾ ಪಂಚಾಯಿತಿಯ ಸ್ವಚ್ಛವಾಹಿನಿ ವಾಹನಕ್ಕೆ ತುಂಬಿಸಿ ದುಂಡಳ್ಳಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿದರು.ತ್ಯಾಜ್ಯ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ರೂ. ೫೦೦ ದಂಡ ವಿಧಿಸಲು ಪಂಚಾಯಿತಿ ನಿರ್ಧರಿಸಿತು. ಮಕ್ಕಳಕಟ್ಟೆ ಕೆರೆ ಸಮೀಪ ಹಾಗೂ ಕಾವೇರಿ ಕಾಲೇಜಿನ ಮುಂಭಾಗ ಬ್ಯಾನರ್ ಅಳವಡಿಸಿ, ಅದರಲ್ಲಿ ರಸ್ತೆ ಬದಿ ತ್ಯಾಜ್ಯ ತಂದು ಸುರಿಯುವವರ ಭಾವಚಿತ್ರ ತೆಗೆದು ಕಳುಹಿಸುವವರಿಗೆ ತ್ಯಾಜ್ಯ ಹಾಕುವವರಿಂದ ವಸೂಲಿ ಮಾಡಿದ ದಂಡದ ಹಣವನ್ನೇ ಬಹುಮಾನವಾಗಿ ನೀಡಲಾಗುವುದು ಎಂದು ಬರೆಯಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಲತೀಫ್ ಹೇಳಿದರು.

- ನಯನಾತಾರ