ಕೊಡ್ಲಿಪೇಟೆ, ಸೆ. ೧೦: ಹೇಮಾವತಿ ನದಿ ಹಿನ್ನೀರಿನಿಂದಾಗಿ ಕೊಡ್ಲಿಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಜಿಲ್ಲೆಯ ಗಡಿಭಾಗದ ಕೊಡ್ಲಿಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಚಾತಕಪಕ್ಷಿಯಂತೆ ಕಾಯುತ್ತಿದ್ದು, ಗ್ರಾಮ ಪಂಚಾಯಿತಿ ಆಡಳಿತವು ಈ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊಡ್ಲಿಪೇಟೆ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಂಬAಧ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ೪೦ ಹೆಚ್.ಪಿ. ಸಾಮರ್ಥ್ಯದ ಫಿಲ್ಟರ್ ಹೌಸ್ ನಿರ್ಮಾಣ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಹೇಮಾವತಿಯಲ್ಲಿ ನೀರಿನ ಸಂಗ್ರಹ ಅಧಿಕವಾಗಿದೆ. ಇದರಿಂದಾಗಿ ಫಿಲ್ಟರ್ ಹೌಸ್ ನೀರಿನಿಂದ ಆವೃತ್ತವಾಗಿದೆ.

ಇದರ ನಡುವೆಯೇ ಭಾರಿ ಗಾಳಿಗೆ ಫಿಲ್ಟರ್ ಹೌಸ್‌ಗೆ ಸಂಪರ್ಕ ಕಲ್ಪಿಸಲಾಗಿದ್ದ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಫಿಲ್ಟರ್ ಹೌಸ್‌ನಿಂದ ನೀರೆತ್ತುವ ಮೋಟಾರ್‌ಗೆ ವಿದ್ಯುತ್ ಕಲ್ಪಿಸುವ ಪ್ರಮುಖ ಮಾರ್ಗ ತುಂಡಾಗಿದೆ. ಇದರಿಂದಾಗಿ ಕುಡಿಯುವ ನೀರನ್ನು ಮೇಲೆತ್ತಲು ಅಸಾಧ್ಯವಾಗಿದೆ. ಪರಿಣಾಮ ಕಳೆದ ಕೆಲವಾರು ದಿನಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಮೊದಲು ಪಂಪ್‌ಹೌಸ್‌ನಲ್ಲಿ ಸಮಸ್ಯೆಯಾದ ಸಂದರ್ಭ ಗ್ರಾಮ ಪಂಚಾಯಿತಿಯಿAದ ಮೋಟಾರ್ ದುರಸ್ತಿಗೊಳಿಸಲಾಗಿತ್ತು. ಆದರೆ ಪ್ರಸ್ತುತ ಪಂಪ್ ಹೌಸ್ ಹೇಮಾವತಿ ಹಿನ್ನೀರಿನಲ್ಲಿ ಮುಳುಗಿರುವುದರಿಂದ ದುರಸ್ತಿ ಕಾರ್ಯ ಕೈಗೊಳ್ಳಲು ಅಸಾಧ್ಯವಾಗಿದೆ. ಇದರಿಂದಾಗಿ ಸದ್ಯ ಟ್ಯಾಂಕರ್‌ಗಳ ಮೂಲಕ ಕೊಡ್ಲಿಪೇಟೆ ಪಟ್ಟಣದ ೫೦೦ಕ್ಕೂ ಅಧಿಕ ಮನೆಗಳಿಗೆ ಗ್ರಾಮ ಪಂಚಾಯಿತಿಯಿAದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳು ವಿಸ್ತರಣೆಯಾಗುತ್ತಿಲ್ಲ.

ಪಟ್ಟಣದ ಕೇಂದ್ರ ಸ್ಥಾನವಾದ ಬಸ್ ನಿಲ್ದಾಣ, ಬಸವೇಶ್ವರ ದೇವಸ್ಥಾನ ರಸ್ತೆ, ಮಸೀದಿ ರಸ್ತೆ, ಸೇರಿದಂತೆ ೫೦೦ ಕ್ಕೂ ಅಧಿಕ ಕುಟುಂಬಗಳು, ಹೊಟೇಲ್, ಕ್ಯಾಂಟೀನ್‌ಗಳಿಗೆ ನೀರಿನ ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಮುಂದಾಗಿದ್ದರೂ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಈ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆ, ಕಂದಾಯ ಇಲಾಖೆ, ಪೊಲೀಸ್ ಉಪಠಾಣೆ, ಸಾರ್ವಜನಿಕ ಶೌಚಾಲಯಕ್ಕೂ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ. ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಸಿಗದ ಹಿನ್ನೆಲೆ ನಿರ್ವಹಣೆ ಕಷ್ಟವಾಗಿದೆ. ಈಗಾಗಲೇ ಅಶುಚಿತ್ವ ಕಂಡುಬರುತ್ತಿದ್ದು, ಸಮಸ್ಯೆ ಹೀಗೆ ಮುಂದುವರೆದರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ.

ಇದರೊಂದಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಯೂ ಅಪೂರ್ಣವಾಗಿದೆ. ನೀರಿಗಾಗಿ ಜನರು ದಿನವಿಡೀ ಕೆಲಸ ಕಾರ್ಯಗಳನ್ನ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ೪೫ ವರ್ಷದ ಹಿಂದೆ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಿದ್ದು, ಇದೀಗ ಟ್ಯಾಂಕ್ ಈಗ ದುಸ್ಥಿತಿಗೆ ತಲುಪಿದೆ. ಪ್ರತಿದಿನ ೧ ಲಕ್ಷ ಲೀಟರ್‌ಗೂ ಹೆಚ್ಚು ನೀರಿನ ಅವಶ್ಯಕತೆ ಕೊಡ್ಲಿಪೇಟೆ ಪಟ್ಟಣಕ್ಕೆ ಇದೆ. ಜಲಜೀವನ್ ಮಿಷನ್ ಕಾಮಗಾರಿಯಿಂದ ೫೦ ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನ್ನು ನಿರ್ಮಾಣ ಮಾಡಲಾಗಿದೆ. ಇದರ ಕೆಲಸ ಅಪೂರ್ಣವಾಗಿರುವುದರಿಂದ ಜನರಿಗೆ ಉಪಯೋಗಕ್ಕೆ ಬರುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ, ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಗ್ರಾ.ಪಂ. ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.