ಸೋಮವಾರಪೇಟೆ, ಸೆ. ೮: ಪ್ರಸಕ್ತ ಸಾಲಿನಲ್ಲಿ ಸೋಮವಾರಪೇಟೆ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ರೂ. ೧೧.೩೪ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಜಲಜಾ ಶೇಖರ್ ಹೇಳಿದರು.

ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಂಘದ ೨೮ನೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ. ೯ ಡಿವಿಡೆಂಡ್ ನೀಡಲಾಗುವುದು ಎಂದರು.

ಸಹಕಾರ ಸಂಘಗಳು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಬೆಳೆದು, ಜನಸಾಮಾನ್ಯರಿಗೆ ಸಾಕಷ್ಟು ನೆರವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ಸ್ಥಾಪನೆಯಾಗಿ ೨೮ ವರ್ಷಗಳು ಕಳೆದಿದ್ದು, ಸಂಘವು ಸ್ವಂತ ಕಟ್ಟಡವನ್ನು ಹೊಂದಿದ್ದು, ಮುಂದುವರೆದು ವಿಸ್ತೃತ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಮಹಿಳೆಯರಿಂದಲೇ ಪ್ರಥಮ ಬಾರಿಗೆ ಸ್ಥಾಪನೆಯಾಗಿರುವ ಸಂಘವಾಗಿ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘ ಮೂಡಿಬಂದಿದೆ. ಸದಸ್ಯರ ಸಹಕಾರದಿಂದ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ಹಿರಿಯ ಸದಸ್ಯರಾದ ನಾಗರತ್ನಮ್ಮ ಮತ್ತು ಎಲಿಜಬೆತ್ ಲೋಬೋ, ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಭಾಗೀರತಿ ಮತ್ತು ತಂಗಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಜಯಂತಿ ಶಿವಕುಮಾರ್, ನಿರ್ದೇಶಕರುಗಳಾದ ಲೋಕೇಶ್ವರಿ ಗೋಪಾಲ್, ಬೇಬಿ ಚಂದ್ರಹಾಸ್, ಉಮಾ ರುದ್ರಪ್ರಸಾದ್, ಶೋಭಾ ಶಿವರಾಜ್, ಸಂಧ್ಯಾರಾಣಿ ಕೃಷ್ಣಪ್ಪ, ರೂಪಶ್ರೀ ರವಿಶಂಕರ್, ಲೀಲಾವತಿ ನಿರ್ವಾಣಿ, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ದಾಕ್ಷಾಯಿಣಿ ಶಿವಾನಂದ್, ಮೀನಾಕ್ಷಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿ ಚಂದ್ರಶೇಖರ್ ಅವರುಗಳು ಉಪಸ್ಥಿತರಿದ್ದರು.