ಮಡಿಕೇರಿ, ಸೆ. ೮: ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ ರಾತ್ರಿ ವೇಳೆಯಲ್ಲಿ ಆಗಮಿಸುವ ಸಾರಿಗೆ ಸಂಸ್ಥೆ ಬಸ್ಗಳು ಬಸ್ ನಿಲ್ದಾಣಕ್ಕೆ ತೆರಳದೆ ನೇರವಾಗಿ ಜ. ತಿಮ್ಮಯ್ಯ ವೃತ್ತದವರೆಗೆ ಮಾತ್ರ ಆಗಮಿಸಿ ತೆರಳುತ್ತಿದ್ದು, ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಪುತ್ತೂರು ಸಾರಿಗೆ ಸಂಸ್ಥೆ ಘಟಕದ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗಿದೆ.
ಪುತ್ತೂರು ಘಟಕದಲ್ಲಿ ಮುಖ್ಯಸ್ಥರನ್ನು ಭೇಟಿ ಮಾಡಿದ ಬಹುಜನ ಸಮಾಜ ಪಾರ್ಟಿ ಕೊಡಗು ಜಿಲ್ಲಾಧ್ಯಕ್ಷ ಆಟ್ರಂಗಡ ದಿವಿಲ್ಕುಮಾರ್ ಹಾಗೂ ಪದಾಧಿಕಾರಿಗಳು ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸುವ ಸಾರಿಗೆ ಸಂಸ್ಥೆ ಬಸ್ಗಳು ನಿಲ್ದಾಣಕ್ಕೆ ತೆರಳದೆ ಜ. ತಿಮ್ಮಯ್ಯ ವೃತ್ತದಿಂದಲೇ ವಾಪಸ್ಸಾಗುತ್ತವೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಒಂಟಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ವೃತ್ತದ ಬಳಿ ಬಸ್ಗಾಗಿ ಕಾಯುವದು ಕಷ್ಟವಾಗುತ್ತದೆ. ಅಲ್ಲದೆ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೂ ಅನಾನುಕೂಲವಾಗುತ್ತದೆ. ಈ ಸಮಸ್ಯೆಯನ್ನು ಸರಿಪಡಿಸುವಂತೆ ಮಡಿಕೇರಿ ಘಟಕ ವ್ಯವಸ್ಥಾಪಕರಿಗೆ ಕಳೆದ ಮಾರ್ಚ್ ತಿಂಗಳಲ್ಲಿಯೇ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನ ಸಿಕ್ಕಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಬಸ್ಗಳು ನಿಲ್ದಾಣಕ್ಕೆ ಆಗಮಿಸಿ ದಾಖಲಾತಿ ಪುಸ್ತಕದಲ್ಲಿ ಚಾಲಕ, ನಿರ್ವಾಹಕರು ಸಹಿ ಮಾಡಿ ತೆರಳುವಂತಹ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಇದಕ್ಕೂ ಸ್ಪಂದನ ದೊರಕದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವದೆಂದು ಹೇಳಿದರು.
ಈ ಸಂದರ್ಭ ಪಕ್ಷದ ಜಿಲ್ಲಾ ಉಸ್ತುವಾರಿ ಕಳ್ಳೀರ ಸುರೇಶ್, ಪ್ರಧಾನ ಕಾರ್ಯದರ್ಶಿ ದೇವಯ್ಯ, ಉಪಾಧ್ಯಕ್ಷ ತೋರೇರ ಉಮೇಶ್ ಉತ್ತಯ್ಯ ಇದ್ದರು.