ಮಡಿಕೇರಿ, ಸೆ. ೮: ವಿಘ್ನನಿವಾರಕ ಆದಿಪೂಜಿತ ಶ್ರೀ ವಿನಾಯಕನ ಆರಾಧನೆ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಗಣಪತಿ ದೇವಾಲಯಗಳು ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಾದಿಗಳೊಂದಿಗೆ, ಮನೆಮನೆಗಳಲ್ಲೂ ಹಾಗೂ ಸಂಘ ಸಂಸ್ಥೆಗಳ ವತಿಯಿಂದಲೂ ಸಾರ್ವಜನಿಕವಾಗಿ ಗೌರಿಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿ ಭಕ್ತಿ ನಮನ ಸಲ್ಲಿಸಲಾಯಿತು. ಕೆಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಉತ್ಸವಮೂರ್ತಿಗಳನ್ನು ಮೊದಲ ದಿನವೇ ವಿಸರ್ಜನೆ ಮಾಡಲಾಗಿದ್ದು, ಇನ್ನೂ ಹಲವೆಡೆಗಳಲ್ಲಿ ವಿನಾಯಕನ ಆರಾಧನೆ ಮುಂದುವರಿದಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಕೋಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶೋತ್ಸವ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಾಲಯವನ್ನು ಹೂವಿನಿಂದ ಅಲಂಕರಿಸಿ ಹಣ್ಣುಕಾಯಿ ಅರ್ಚನೆಯೊಂದಿಗೆ ವಿವಿಧ ಪೂಜೆ, ಸೇವೆಗಳು ನಡೆದವು. ಭಕ್ತಾದಿಗಳು ಈಡುಗಾಯಿ ಒಡೆದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ಇಲ್ಲಿನ ವಿಜಯ ನಗರದಲ್ಲಿರುವ ಶ್ರೀ ವಿಜಯ ವಿನಾಯಕ ಸನ್ನಿಧಿಯಲ್ಲಿಯೂ ದೇವರಿಗೆ ವಿಶೇಷ ಅಲಂಕಾರದೊAದಿಗೆ ವಿಶೇಷ ಪೂಜಾದಿ ಸೇವೆಗಳು ನಡೆದವು. ಸಾಮೂಹಿಕ ಗಣಹೋಮದೊಂದಿಗೆ ಮಹಾಮಂಗಳಾರತಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಭಕ್ತರು ವಿಜಯ ವಿನಾಯಕನಿಗೆ ಶ್ರದ್ಧೆಯಿಂದ ನಮಿಸಿ ಭಕ್ತಿ ಮೆರೆದರು.
ಓಂಕಾರೇಶ್ವರ ದೇವಾಲಯ, ದೃಷ್ಠಿ ಗಣಪತಿ ದೇವಾಲಯ, ಪ್ರಸನ್ನ ಗಣಪತಿ ದೇವಾಲಯ, ವಿದ್ಯಾಗಣಪತಿ ಹಾಗೂ ಇತರ ದೇವಾಲಯಗಳಲ್ಲೂ ಗಣೇಶೋತ್ಸವ ಪೂಜಾದಿಗಳು ನಡೆದವು. ಮಡಿಕೇರಿ ನಗರದ ೩೯ ಕಡೆಗಳಲ್ಲಿ ವಿನಾಯಕನ ಆರಾಧನೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಈ ಪೈಕಿ ಸುಮಾರು ೧೮ ಸಮಿತಿಗಳು ನಿನ್ನೆ ದಿನವೇ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡಿವೆ. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ)
ಕುಶಾಲನಗರ
ಕುಶಾಲನಗರ: ಗಣೇಶ ಚತುರ್ಥಿ ಅಂಗವಾಗಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು ೩೧ ಕಡೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಘ ಸಂಸ್ಥೆಗಳ ಮೂಲಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರ ಮೂಲಕ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಕುಶಾಲನಗರ ಪಟ್ಟಣದಲ್ಲಿ ಶನಿವಾರ ಏಳು ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ವಿಗ್ರಹವನ್ನು ಮೆರವಣಿಗೆ ಮೂಲಕ ತೆರಳಿ ವಿಸರ್ಜನೆ ಮಾಡಲಾಯಿತು. ಕುಶಾಲನಗರ ಸೂರ್ಯ ಸಿದ್ಧಿ ವಿನಾಯಕ ಬಳಗ, ಆರ್ ಕೆ ಬಡಾವಣೆ, ಶೈಲಜಾ ಬಡಾವಣೆ, ಗೋಪಾಲ ಸರ್ಕಲ್ ಬಳಿ ಸೇರಿದಂತೆ ಪಟ್ಟಣ ಏಳು ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ಮೂರ್ತಿಗಳನ್ನು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತಂದು ಕಾವೇರಿ ನದಿ ತಟದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಕೆರೆಯಲ್ಲಿ ಪೂಜೆ ಸಲ್ಲಿಸಿ ಸದಸ್ಯರು ವಿಸರ್ಜನೆ ಮಾಡಿದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ೬೩ ಕಡೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿತ್ತು. ಗಣೇಶ ಚತುರ್ಥಿ ಅಂಗವಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೧೧೪ ಕಡೆ ಸಂಘ ಸಂಸ್ಥೆಗಳ ಮೂಲಕ ಗಣಪತಿ ಪ್ರತಿಷ್ಠಾಪನೆ ನಡೆದಿದೆ.
ಗೌರಿ ಗಣೇಶ ಹಬ್ಬ ಅಂಗವಾಗಿ ಕುಶಾಲನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಪಟ್ಟಣದ ಗಣಪತಿ ದೇವಾಲಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಕುಶಾಲನಗರ ರಥ ಬೀದಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಾಸವಿ ಯುವಜನ ಸಂಘ ವತಿಯಿಂದ ೧೦೧ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ತಾ.೧೦ ರಂದು (ಇಂದು) ಕುಶಾಲನಗರ ಪಟ್ಟಣದಲ್ಲಿ ೧೧ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡುವ ಕಾರ್ಯಕ್ರಮ ನಡೆಯಲಿದೆ.
ವೀರಾಜಪೇಟೆ: ವೀರಾಜಪೇಟೆ ನಗರದ ಐತಿಹಾಸಿಕ ಗೌರಿ-ಗಣೇಶೋತ್ಸವ ಪ್ರತಿಷ್ಠಾಪನೆ ಶನಿವಾರ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ ಹೋಮ ಜರುಗಿತು. ಬೆಳಿಗ್ಗೆ ಸಾಮೂಹಿಕ ಗಣಹೋಮ ನೆರವೇರಿತು. ಸಾವಿರಾರು ಹೂಗಳಿಂದ ಅಲಂಕೃತಗೊAಡ ಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.
ನಗರಕ್ಕೆ ಕಳಸ ಪ್ರಾಯದಂತಿರುವ ಶ್ರೀ ವiಹಾಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವಮೂರ್ತಿಯನ್ನು ಪ್ರತಿಪ್ಠಾಪಿಸಲಾಯಿತು. ಬಳಿಕ ಸಿಡಿ ಮದ್ದು ಸಿಡಿಸಿ ಉಳಿದ ಸಮಿತಿಗಳಿಗೆ ಮಾಹಿತಿ ತಿಳಿಸಲಾಯಿತು. ನಂತರದಲ್ಲಿ ಇತರ ೨೧ ಸ್ಥಳಗಳಲ್ಲಿ ಗಜಾನನ ಉತ್ಸವಮೂರ್ತಿಯ ಪ್ರತಿಷ್ಠಾಪನೆ ಶಾಶ್ತೊçÃಕ್ತವಾಗಿ, ಸಂಪ್ರದಾಯಬದ್ದವಾಗಿ ನೆರವೇರಿತು. ಇದೇ ವೇಳೆ ಗಣಪತಿ ದೇವಾಲಯದಲ್ಲಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭಜನೆ, ನೃತ್ಯ ಪ್ರದರ್ಶನ ನಡೆಯಿತು.
ಪಟ್ಟಣದ ಪ್ರಮುಖ ಗೌರಿ-ಗಣೇಶೋತ್ಸವ ಸಮಿತಿಗಳಾದ ಕಾವೇರಿ ಗಣೇಶೋತ್ಸವ ಸಮಿತಿ, ಮೂರ್ನಾಡು ರಸ್ತೆ, ಶ್ರೀ ವಿನಾಯಕ ಸೇವಾ ಸಮಿತಿ, ಪಂಜರ್ಪೇಟೆ, ಶ್ರೀ ಮಹಾಗಣಪತಿ ಸೇವಾ ಸಂಘ, ಗಣಪತಿ ಬೀದಿ, ಶ್ರೀ ಬಸವೇಶ್ವರ ದೇವಾಲಯ, ವiಹಾಗಣಪತಿ ದೇವಾಲಯ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸು ನಗರ, ವಿನಾಯಕ ಭಕ್ತ ಮಂಡಳಿ, ಅಂಗಾಳ ಪರಮೇಶ್ವರಿ ದೇವಸ್ಥಾನ, ನೇತಾಜಿ ಗಣೇಶೋತ್ಸವ ಸಮಿತಿ, ನೆಹರು ನಗರ, ವಿಜಯ ವಿನಾಯಕ ಉತ್ಸವ ಸಮಿತಿ, ದಖ್ಖನಿ ಮೊಹಲ್ಲಾ, ಕಣ್ಮಣಿ ಯುವಕ ಸಂW,À ಮಲೆತಿರಿಕೆ ಬೆಟ್ಟ, ಸರ್ವಸಿದ್ದಿ ವಿನಾಯಕ ಉತ್ಸವ ಸಮಿತಿ, ಸುಂಕದಕಟ್ಟೆ, ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಕೆ. ಬೋಯಿಕೇರಿ, ಜಲದರ್ಶಿನಿ ಗಣೇಶೋತ್ಸವ ಸಮಿತಿ. ಚಿಕ್ಕಪೇಟೆ, ಗಣಪತಿ ಸೇವಾ ಸಮಿತಿ, ಪೌರಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ, ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ಮೀನುಪೇಟೆ, ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಹರಿಕೆರೆ ಸುಣ್ಣದ ಬೀದಿ, ಶ್ರೀ ವಿನಾಯಕ ಯುವಕರ ಸಮಿತಿ, ಕುಕ್ಲೂರು, ಶ್ರೀ ಬಾಲ ಆಂಜನೇಯ ಗಣಪತಿ ಸೇವಾ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಗೌರಿಕೆರೆ ಸೇವಾ ಸಮಿತಿ,ವಿನಾಯಕ ಸೇವಾ ಸಮಿತಿ ಶಿವಕೇರಿ ಸೇರಿದಂತೆ ನಗರದ ೨೨ ಸ್ಥಳಗಳಲ್ಲಿ ವಿಘ್ನವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ನಗರದ ಆಯ್ದ ಸಮಿತಿಗಳ ವತಿಯಿಂದ ೧೧ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿದಿನ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ. ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ತಾ.೧೭ ರಂದು ರಾತ್ರಿ ಅನಂತಪದ್ಮನಾಭ ವೃತದಂದು ವಿದ್ಯುತ್ ಅಲಂಕೃತ ಪಂಟಪದಲ್ಲಿ ಕುಳ್ಳಿರಿಸಿ ಶೋಭಾಯಾತ್ರೆಯ ಮೂಲಕ ಮುಖ್ಯಬೀದಿಗಾಗಿ ಸಾಗಿ ೧೮ ರ ಮುಂಜಾನೆ ಗೌರಿಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.ಮಡಿಕೇರಿ: ನಗರದ ಶಾಂತಿನಿಕೇತನ ಯುವಕ ಸಂಘ, ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಮಂದಿರದ ಒಳಾಂಗಣದ ಮಾದರಿಯನ್ನು ಸೃಷ್ಟಿಸಿದೆ. ಈ ಮಾದರಿಯಲ್ಲಿ ವಿಘ್ನ ನಿವಾರಕ ಗಣಪ ಶ್ರೀರಾಮನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ.
ಶಾಂತಿನಿಕೇತನ ಯುವಕ ಸಂಘ ೪೬ ನೇ ವರ್ಷದ ಗಣೇಶೋತ್ಸವ ಆಚರಿಸುತ್ತಿದ್ದು, ಕಲಾವಿದ ಪಿ.ಎ. ರವಿ ಹಾಗೂ ಸಂಗಡಿಗರು ಈ ವಿಶೇಷ ವಿನ್ಯಾಸವನ್ನು ಆಕರ್ಷಕವಾಗಿ ರಚಿಸಿದ್ದಾರೆ.
ತಾ.೧೯ ರಂದು ಸಂಜೆ ೭ ಗಂಟೆಗೆ ಸಾಮೂಹಿಕ ರಂಗಪೂಜೆ, ತಾ. ೨೧ ರಂದು ಮಹಾಪೂಜೆಯ ನಂತರ ನಗರದಲ್ಲಿ ಶ್ರೀ ಮಹಾಗಣಪತಿ ಮೂರ್ತಿಯ ಶೋಭಾಯಾತ್ರೆ ಸಾಗಲಿದೆ. ಈ ಬಾರಿ ಲೋಕ ಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ ಎಂಬ ಕಥಾವಸ್ತುವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಕೆ.ಹೆಚ್. ಚೇತನ್ ತಿಳಿಸಿದ್ದಾರೆ.ಪೊನ್ನಂಪೇಟೆ : ಪೊನ್ನಂಪೇಟೆ ಪಟ್ಟಣದ ೭ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಬೆಳಿಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಗಣಪತಿ ಹೋಮದ ನಂತರ ಎಲ್ಲಾ ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಇಲ್ಲಿನ ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಶಿವ ಕಾಲೋನಿಯ ಶಿವ ಯುವಕ ಸಂಘ, ನೆಹರು ನಗರ ವಿನಾಯಕ ಯುವಕರ ಸಂಘ ಹಾಗೂ ಕಾವೇರಿ ನಗರದ ಗಣೇಶೋತ್ಸವ ಸಮಿತಿಯವರು ತಮ್ಮ ತಮ್ಮ ಬಡಾವಣೆಗಳಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡಿದರು.
ಬಸವೇಶ್ವರ ದೇವಸ್ಥಾನದಿಂದ ಗಣೇಶ ಮೂರ್ತಿಯನ್ನು ವಾಹನದಲ್ಲಿ ಮೆರವಣಿಗೆ ಮೂಲಕ ತಮ್ಮ ತಮ್ಮ ಬಡಾವಣೆಗೆ ತೆಗೆದುಕೊಂಡು ಹೋಗುವಾಗ ಯುವಕರ ತಂಡ ಡಿಜೆ, ವಾಲಗ ಹಾಗೂ ಬ್ಯಾಂಡ್ ಸೆಟ್ ನಾದಕ್ಕೆ ಕುಣಿದು ಕುಪ್ಪಳಿಸಿತು. ವೀರಗಾಸೆ ಕುಣಿತ, ಗೊಂಬೆ ಕುಣಿತಗಳು ನೋಡುಗರ ಗಮನ ಸೆಳೆದವು. ಗಣಪತಿ ಹೋಮ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಪೂಜಾ ಕಾರ್ಯಕ್ರಮದ ಸಂದರ್ಭ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮತ್ತು ವಿವಿಧ ಸಂಘದ ಪದಾಧಿಕಾರಿಗಳು ಹಾಜರಿದ್ದರು.