ಸೋಮವಾರಪೇಟೆ, ಆ. ೨೬: ತಾಲೂಕಿನಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕಾಫಿ ಮತ್ತು ಕಾಳುಮೆಣಸು ಶೇ.೭೦ರಿಂದ ೮೦ರಷ್ಟು ಫಸಲು ಹಾನಿಯಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೆಕ್ಟೇರ್‌ಗೆ ಕನಿಷ್ಟ ೧ಲಕ್ಷ ರೂ.ಗಳ ಬೆಳೆಹಾನಿ ಪರಿಹಾರ ನೀಡಬೇಕೆಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಎಂ.ಮೋಹನ್ ಬೋಪಣ್ಣ ಮಾತನಾಡಿ, ಅತೀವೃಷ್ಟಿ, ಅನಾವೃಷ್ಟಿ ಮತ್ತು ಅಕಾಲಿಕ ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗಿದ್ದು, ಸರ್ಕಾರ ಸೂಕ್ತ ಬೆಳೆಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

೨೦೨೨-೨೩ನೇ ಸಾಲಿನಲ್ಲಿ ವಾಡಿಕೆ ಹಿಂಗಾರು ಮಳೆ ಕಡಿಮೆಯಾದ ಹಿನ್ನೆಲೆ ಬಿಸಿಲಿನ ತಾಪಕ್ಕೆ ಅರೇಬಿಕಾ ಕಾಫಿ ಗಿಡಗಳು ಬಿಳಿಕಾಂಡಕೊರಕ ಕೀಟಬಾಧೆಯಿಂದ ನಾಶವಾದವು. ಮಾರ್ಚ್, ಏಪ್ರಿಲ್‌ನಲ್ಲಿ ಹೂಮಳೆ ಬರಲಿಲ್ಲ. ಕಡಿಮೆ ಪ್ರಮಾಣದಲ್ಲಿ ಮಳೆಬಿದ್ದು ಬಿಸಿಲಿನ ತಾಪಕ್ಕೆ ಹೂ ಸುಟ್ಟುಹೋಗಿ ನಷ್ಟವಾಯಿತು. ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ.೭೦ರಷ್ಟು ಹೆಚ್ಚಿನ ಮಳೆಯಾಗಿ ಕಾಫಿ, ಕಾಳುಮೆಣಸು ಫಸಲು ಶೇ.೭೦ ರಷ್ಟು ಹಾನಿಯಾಗಿದೆ. ಕಾಳುಮೆಣಸು ಬಳ್ಳಿಗಳು ಸೊರಗು ರೋಗಕ್ಕೆ ತುತ್ತಾಗಿ ಬಳ್ಳಿಗಳು ನಾಶವಾಗಿವೆ. ಅರೇಬಿಕಾ ಕಾಫಿ ತೋಟಗಳು ರೋಗಪೀಡಿತ ವಾಗಿವೆ ಎಂದು ಹೇಳಿದರು.

ಕೊಡಗಿನಲ್ಲಿ ಕಾಫಿ ಪುನಶ್ಚೇತನಕ್ಕೆ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರ ಹಿಸಿದರು. ಸರ್ಕಾರದ ಸೌಲಭ್ಯಗಳು ಸಿಗದೇ ಈಗಾಗಲೇ ಕೊಡಗಿನ ಕಿತ್ತಳೆ ಅವಸಾನವಾಗಿದೆ. ಕಾಫಿ ಉದ್ದಿಮೆಗೆ ಸೌಲಭ್ಯ ನೀಡದಿದ್ದರೆ ಕೊಡಗಿನಲ್ಲಿ ಕಾಫಿ ಅವಸಾನದ ಅಂಚಿಗೆ ತಲುಪುವ ಆತಂಕವಿದೆ ಎಂದು ಎಚ್ಚರಿಕೆ ನೀಡಿದರು.

ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆಯಿಂದ ಸೋಮವಾರಪೇಟೆ ತಾಲೂಕಿನಾದ್ಯಂತ ಅಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಗ್ರಾಮವಾರು ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕೃಷಿ ಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್, ಜಿಲ್ಲೆಯ ಶಾಸಕರುಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಈ ಸಂಬAಧಿತ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಬಿ.ಎಂ.ಲವ, ಕೆ.ಪಿ.ಬಸಪ್ಪ, ಪದಾಧಿಕಾರಿಗಳಾದ ಅನಂತರಾಮ್, ಸೋಮಶೇಖರ್, ತಾಕೇರಿ ಪ್ರಕಾಶ್ ಇದ್ದರು.