ಮಡಿಕೇರಿ, ಆ. ೨೪: ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಅಪಘಾತವಾದ ಘಟನೆ ಬೋಯಿಕೇರಿ ತಿರುವಿನಲ್ಲಿ ನಡೆದಿದೆ.
ಕಾಸರಗೋಡಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ರಿಟ್ಸ್ ಕಾರು ಹಾಗೂ ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಅಶ್ವಮೇಧ ಬಸ್ ನಡುವೆ ಹೆದ್ದಾರಿಯ ಸಿದ್ಧಿಬುದ್ಧಿ ವಿನಾಯಕ ದೇವಾಲಯ ಮುಂಭಾಗ ಮುಖಾಮುಖಿ ಅಪಘಾತವಾಗಿದ್ದು, ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ೫ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಸರಗೋಡುವಿನ ನಸ್ಬಿಯ ಬಾನು (೩೩), ಜಜನಾ ಅಶ್ರಫ್ ಅಲಿ (೧೦), ಫಿಲ್ಜಾ ಅಶ್ರಫ್ (ಒಂದೂವರೆ ವರ್ಷ), ಆಹೀರ (೨ ವರ್ಷ) ಹಾಗೂ ಚಾಲಕ ಅಬ್ದುಲ್ ರಹೀಂಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಡಿಕ್ಕಿಯಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬಸ್ಗೂ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ತೆರಳಿ ಪರಿಶೀಲಿಸಿದರು. ಅಪಘಾತದಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.