ಮಡಿಕೇರಿ, ಆ. ೨೪: ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ಚೆಂಬುವಿನ ಅತ್ಯಾಡಿ ಗ್ರಾಮದಲ್ಲಿ ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಲು ಸೇತುವೆಯ ಉದ್ಘಾಟನೆ ತಾ. ೨೫ರಂದು (ಇಂದು) ಬೆಳಿಗ್ಗೆ ೧೧.೩೦ ಗಂಟೆಗೆ ನೆರವೇರಲಿದೆ ಎಂದು ಫೌಂಡೇಶನ್ನ ಮಾಧ್ಯಮ ಸಲಹೆಗಾರ ಕಾರ್ತಿಕ್ ಭಟ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಮಳೆ ಹೆಚ್ಚಾದರೆ ಉಂಬಾಳೆ ಹೊಳೆ ತುಂಬಿ ಹರಿದು ಇಡೀ ಗ್ರಾಮ ದ್ವೀಪವಾಗಿ ಬದಲಾಗುತ್ತದೆ. ಜನರು ಎಲ್ಲಿಗೂ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತು ಹೊಳೆ ನೀರಿನ ಮಟ್ಟ ಕಡಿಮೆಯಾಗುವವರೆಗೂ ಕಾಯುತ್ತಾ ಕೂರಬೇಕಾದ ಪರಿಸ್ಥಿತಿ ಇದೆ. ಈ ಅತ್ಯಾಡಿ ಗ್ರಾಮದಿಂದ ಹೊರಭಾಗಕ್ಕೆ ಬರಬೇಕಾದರೆ ಅಲ್ಲಿನ ಗ್ರಾಮಸ್ಥರು ಈ ಹೊಳೆಯನ್ನು ದಾಟಿ ಬರಬೇಕಾಗಿದೆ.
ಈ ಬಗ್ಗೆ ‘ಶಕ್ತಿ’ಯಲ್ಲಿ ವಿವರವಾದ ವರದಿ ಕೂಡ ಪ್ರಕಟಗೊಂಡಿತ್ತು. ಜೂನ್ ೧ರಂದು ಫೌಂಡೇಶನ್ ತಂಡ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಕೆಲವು ತಜ್ಞರು ಹಾಗೂ ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿದಾಗ, ಇಲ್ಲಿಗೆ ತಾತ್ಕಾಲಿಕವಾಗಿ ಕಾಲು ಸೇತುವೆ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಪ್ರಣವ್ ಫೌಂಡೇಶನ್, ತೂಗುಸೇತುವೆಗಳ ಸರದಾರ, ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ತಂಡವನ್ನು ಸಂಪರ್ಕಿಸಿತು. ಈ ತಂಡ ಪ್ರಣವ್ ಫೌಂಡೇಶನ್ ಮನವಿಗೆ ಸ್ಪಂದಿಸಿ ಜೂನ್ ೧೭ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಯೋಜನೆ ರೂಪಿಸಲಾಯಿತು.
(ಮೊದಲ ಪುಟದಿಂದ) ಜೂನ್ ೨೫ರಂದು ಪ್ರಣವ್ ಫೌಂಡೇಶನ್ ಟ್ರಸ್ಟಿಗಳು ಹಾಗೂ ಸದಸ್ಯರು ಕೊಡಗು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಕುರಿತು ಮಾಹಿತಿ ಹಾಗೂ ಮನವಿ ಪತ್ರ ಸಲ್ಲಿಸಿ ಅನುಮತಿ ಪಡೆದುಕೊಂಡಿತು.
ಆಗಸ್ಟ್ ೧೦ ರಂದು ಕಾಲುಸೇತುವೆಯ ಕಾಮಗಾರಿ ಆರಂಭವಾಗಿ ಆಗಸ್ಟ್ ೨೨ಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಕಾರ್ತಿಕ್ ಭಟ್ ಮಾಹಿತಿಯಿತ್ತರು.
ಉಕ್ಕಿನಿಂದ ಮಾಡಿರುವ ಈ ಸೇತುವೆ ೨೪ ಮೀಟರ್ ಉದ್ದ, ೦.೭೫ ಮೀಟರ್ ಅಗಲವಿದ್ದು, ಒಂದೇ ಬಾರಿಗೆ ೧೦ ಮಂದಿ ನಿಲ್ಲಬಹುದಾಗಿದೆ. ೫ ವರ್ಷ ಬಾಳಿಕೆ ಬರಲಿದೆ ಎಂದರು. ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ಮೈಸೂರು ಲೋಕಸಭಾ ಕೇತ್ರದ ಸಂಸದರಾದ ಯದುವೀರ್ ಒಡೆಯರ್, ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ಅತ್ಯಾಡಿ ಗ್ರಾಮಸ್ಥರು, ಕೊಡಗು ಜಿಲ್ಲೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಶನ್, ಟೀಮ್೧೨ ಆಫ್ ರೋಡರ್ಸ್ ಮತ್ತು ಮಲ್ನಾಡ್ ಯೂತ್ ಅಸೋಸಿಯೇಶನ್ ಸಹಕಾರ ನೀಡಿದೆ ಎಂದು ಕಾರ್ತಿಕ್ ಭಟ್ ವಿವರಿಸಿದರು.
ಗೋಷ್ಠಿಯಲ್ಲಿ ಫೌಂಡೇಶನ್ನ ಟ್ರಸ್ಟಿಗಳಾದ ಎನ್. ನೇತ್ರ, ಮಂಜುನಾಥ್ ಭಟ್, ಮಹೇಶ್ ರೈ, ಯೋಜನೆಯ ಸಂಚಾಲಕ ದೇವಿಪ್ರಸಾದ್, ಅತ್ಯಾಡಿ ಗ್ರಾಮಸ್ಥ ಕಿರಣ್ ಅಟ್ಲೂರ್ ಉಪಸ್ಥಿತರಿದ್ದರು.