ಮಡಿಕೇರಿ, ಆ. ೨೩: ಲೆಕ್ಕಪತ್ರ ಮಂಡನೆ ಮೂಲಕ ಮುನ್ನುಡಿ ಇಡಬೇಕಾಗಿದ್ದ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಪ್ರಾರಂಭಿಕ ಸಭೆಯಲ್ಲಿ ಕೆಲವೊಂದು ವಿಚಾರಗಳಿಗೆ ಆಕ್ಷೇಪ ವ್ಯಕ್ತವಾಗಿ ಗೊಂದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆ ಮಡಿಕೇರಿ ದಸರಾ ಸಮಿತಿಯ ಲೆಕ್ಕಪತ್ರ ಮಂಡನೆ ಸಭೆಯನ್ನು ಮುಂದೂಡಿ ‘ಆಡಿಟ್’ ವರದಿಯನ್ನು ಪಡೆದು ಸಭೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಇಲ್ಲಿನ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ಕಳೆದ ದಸರಾ ಆಚರಣೆಯ ಲೆಕ್ಕಪತ್ರ ಮಂಡನೆ ಸಭೆ ನಿಗದಿಯಾಗಿತ್ತು. ಪ್ರಾರಂಭಿಕವಾಗಿ ಕಾರ್ಯಕ್ರಮದ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ವಾಚಿಸಿ ಅನುಮೋದನೆ ಪಡೆದುಕೊಂಡರು.
ಖಜಾಂಚಿ ಅರುಣ್ ಶೆಟ್ಟಿ ವಂತಿಗೆ ಮೂಲಕ ಸಂಗ್ರಹವಾದ ರೂ. ೯.೫೭ ಲಕ್ಷ, ಕೆಡಿಸಿಸಿ ಬ್ಯಾಂಕ್ ಮೂಲಕ ಖರ್ಚಾದ ರೂ. ೯.೬೧ ಲಕ್ಷ, ಪಾವತಿಸಲು ಬಾಕಿ ಇರುವ ರೂ. ೫.೨೦ ಲಕ್ಷ ಹಾಗೂ ಸರಕಾರದಿಂದ ಬಂದ ರೂ. ೯೫ ಲಕ್ಷ ಹಣದ ಆಯವ್ಯಯ ಕುರಿತ ಲೆಕ್ಕಪತ್ರ ಮಂಡಿಸಿದರು. ಈ ವೇಳೆ ಸಮಿತಿ ಪ್ರಮುಖರು, ಹಿರಿಯರು, ಸಾರ್ವಜನಿಕರು ಲೆಕ್ಕಪತ್ರದಲ್ಲಿ ಹಲವಷ್ಟು
(ಮೊದಲ ಪುಟದಿಂದ) ನ್ಯೂನತೆಗಳಿವೆ ಎಂದು ಪ್ರಸ್ತಾಪಿಸಿದರು. ಇದರಿಂದ ಸಭೆ ಗೊಂದಲದ ವಾತಾವರಣಕ್ಕೆ ಬದಲಾವಣೆಗೊಂಡಿತು.
ಸಮಿತಿಯ ಸಲಹೆಗಾರರಾದ ಜಿ. ಚಿದ್ವಿಲಾಸ್ ಮಾತನಾಡಿ, ಡಿಜಿಟಲ್ ಪಾವತಿ ಮೂಲಕ ಸಂದಾಯವಾದ ಹಣ ಯಾರಿಂದ ಬಂದಿದೆ ಎಂಬುದರ ಕುರಿತು ಲೆಕ್ಕಪತ್ರ ಉಲ್ಲೇಖಿಸುವಂತೆ ಸಲಹೆ ನೀಡಿದರು.
ಆಹ್ವಾನಿತರಾದ ಬಿ.ಆರ್. ಸವಿತಾ ರೈ ಮಾತನಾಡಿ, ಉಪಸಮಿತಿ ಅಧ್ಯಕ್ಷರ ಸಭೆ ನಡೆಸಿ ವ್ಯವಸ್ಥಿತವಾಗಿ ಲೆಕ್ಕಪತ್ರವನ್ನು ತಯಾರು ಮಾಡಬೇಕಾಗಿತ್ತು. ಬೆಂಗಳೂರಿಗೆ ಹೋದ ಖರ್ಚು ರೂ. ೮೦ ಸಾವಿರ ತಗುಲಿದೆ. ಮೂರು ಬಾರಿ ಬೆಂಗಳೂರಿಗೆ ತೆರಳಲು ಇಷ್ಟೊಂದು ಹಣ ವ್ಯಯದ ಅನಿವಾರ್ಯತೆ ಇತ್ತೆ? ಅಲ್ಲದೆ ಯಾವುದೇ ಲೆಕ್ಕ ಪರಿಶೋಧಕರು ಅಂಗೀಕೃತಗೊಳಿಸದ ಲೆಕ್ಕಪತ್ರವನ್ನು ಸಭೆಗೆ ಮಂಡನೆ ಮಾಡಿರುವುದು ಸರಿಯಲ್ಲ. ಇದು ಜನೋತ್ಸವ ಆಗಿರುವ ಕಾರಣ ಪಾರದರ್ಶಕವಾಗಿ ಲೆಕ್ಕಪತ್ರದ ಮಂಡನೆ ಮಾಡಬೇಕು. ಲೆಕ್ಕ ಪರಿಶೋಧಕರಿಂದ ಆಡಿಟ್ ವರದಿ ಮಾಡಿಸಿ, ಮತ್ತೊಮ್ಮೆ ಲೆಕ್ಕಪತ್ರ ಮಂಡಿಸಬೇಕು; ಈ ಸಭೆ ಮುಂದೂಡಿ ಎಂದು ಆಗ್ರಹಿಸಿದರು. ದಸರಾ ಸಮೀಪಿಸುವಾಗ ಸಭೆ, ಆಯವ್ಯಯ ಮಂಡಿಸುವುದು ಸರಿಯಲ್ಲ. ಇದು ಕೂಡ ಗೊಂದಲಕ್ಕೆ ಕಾರಣ ಎಂದು ಅಭಿಪ್ರಾಯಿಸಿದರು.
ದಶಮಂಟಪ ಸಮಿತಿಯ ಕುಶ ಮಾತನಾಡಿ, ೨ ದಿನ ಊಟದ ಖರ್ಚು ರೂ. ೨ ಲಕ್ಷ ತಗುಲಿದೆ. ಸಾರ್ವಜನಿಕವಾಗಿ ಅನ್ನದಾನ ಮಾಡಿದರೆ ಇಷ್ಟೊಂದು ಹಣ ಖರ್ಚಾಗುವುದಿಲ್ಲ ಎಂದು ಕುಟುಕಿದರು.
ಸಾಂಸ್ಕೃತಿಕ ಸಮಿತಿಯ ತೆನ್ನೀರ ಮೈನಾ ಮಾತನಾಡಿ, ಆಯವ್ಯಯ ಸಮರ್ಪಕ ಮಾಹಿತಿ ಲೆಕ್ಕಪತ್ರದಲ್ಲಿರಬೇಕು. ಇದು ಸರಕಾರಿ ಪ್ರ್ರಾಯೋಜಕತ್ವ ಕಾರ್ಯಕ್ರಮವಾದ ಹಿನ್ನೆಲೆ ಖರ್ಚಿನ ವಿಚಾರ ಸ್ಪಷ್ಟವಾಗಿರಬೇಕು. ಸರಿಯಾದ ಮಾಹಿತಿ ಇಲ್ಲದಿದ್ದಲ್ಲಿ ಅದು ವಂಚನೆ ಪ್ರಕರಣವಾಗುತ್ತದೆ. ಇದು ಬುಟಾಟಿಕೆ ಲೆಕ್ಕಾಚಾರವಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿ ಆಯವ್ಯಯದ ಗೊಂದಲಗಳನ್ನು ಬಗೆಹರಿಸಿ ಮತ್ತೊಂದು ಸಭೆ ನಡೆಸಿ ಲೆಕ್ಕಪತ್ರ ಮಂಡನೆಗೆ ಒತ್ತಾಯಿಸಿದರು.
ಆನಂದ್ ಕೊಡಗು ಮಾತನಾಡಿ, ಮರಳು ಕಲಾವಿದೆಗೆ ರೂ. ೪೦ ಸಾವಿರ ಪಾವತಿಯಾಗಿದೆ. ಅದಕ್ಕೆ ಅಳವಡಿಸಿದ ಲೈಟಿಂಗ್ಗೆ ರೂ. ೧ ಲಕ್ಷ ಖರ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಮಜಾಯಿಷಿಕೆ ನೀಡಿದ ಸಾಂಸ್ಕೃತಿಕ ಸಮಿತ ಅಧ್ಯಕ್ಷ ಎಚ್.ಟಿ. ಅನಿಲ್, ಕಲಾವಿದೆ ರಚಿಸಿದ ಕಲಾಕೃತಿಯನ್ನು ೧೨ ದಿನಗಳ ಕಾಲ ಪ್ರದರ್ಶನಕ್ಕೆ ಇಟ್ಟ ಸಂದರ್ಭ ಬೆಳಕನ್ನು ಒದಗಿಸಿದ ಖರ್ಚು ಅದು ಎಂದರು.
ಹರೀಶ್ ಆಚಾರ್ಯ ಮಾತನಾಡಿ, ರೂ. ೨೦ ಸಾವಿರ ಮೇಲಿನ ಪಾವತಿಗೆ ಚೆಕ್ ನೀಡಬೇಕು. ಆದರೆ, ಲೆಕ್ಕಪತ್ರದಲ್ಲಿ ನೇರ ನಗದು ನೀಡಿದ ಅಂಶಗಳಿವೆ. ಕಾಲಾವಕಾಶ ತೆಗೆದುಕೊಂಡು ಆಡಿಟ್ ವರದಿ ಸಲ್ಲಿಕೆಗೆ ಒತ್ತಾಯಿಸಿದರು.
ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ರೂ. ೩೬ ಲಕ್ಷ ವೇದಿಕೆಗಾಗಿ ಖರ್ಚಾಗಿದೆ. ವಿಜಯ ಪ್ರಕಾಶ್ ಸಂಗೀತ ರಸಮಂಜರಿ, ಯುವ ದಸರಾಕ್ಕೆ ಅಂದಾಜಿಗಿAತ ಹೆಚ್ಚಿನ ಮೊತ್ತ ಖರ್ಚಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.
ಮಂಟಪ ಸಮಿತಿಯ ಡಿಶು ಮಾತನಾಡಿ, ಮೈದಾನಕ್ಕೆ ಮೇಲ್ಛಾವಣಿ ಅಳವಡಿಸಿದರೂ ಹೆಚ್ಚಿನ ಮಟ್ಟದ ಖರ್ಚಾಗುತ್ತಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಿ ಮೇಲ್ಛಾವಣಿ ಅಳವಡಿಸುವ ಅವಶ್ಯಕತೆ ಇತ್ತೆ? ಎಂದು ಪ್ರಶ್ನಿಸಿದರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ೧೦ ದಿನ ನಗರದ ದೇವಾಲಯಗಳ ರಸ್ತೆಗಳಲ್ಲಿ ಲೈಟಿಂಗ್ ಅಳವಡಿಸಲಾಗಿತ್ತು. ಈ ಹಿನ್ನೆಲೆ ಖರ್ಚು ಹೆಚ್ಚಾಗಿದೆ. ಈ ಬಾರಿ ದಸರಾಕ್ಕೆ ರೂ. ೩ ಕೋಟಿ ಅನುದಾನದ ಬೇಡಿಕೆ ಸಲ್ಲಿಸಲು ನಿರ್ಣಯಿಸಲಾಗಿದೆ. ಲೆಕ್ಕಪತ್ರವನ್ನು ವ್ಯವಸ್ಥಿತವಾಗಿ ಮುಂದಿನ ಸಭೆಯಲಿ ಮಂಡಿಸಲಾಗುವುದು ಎಂದರು.
ಇದಕ್ಕೆ ದೇವಾಲಯ ಮಂಟಪ ಸಮಿತಿಗಳು ಕೊನೆ ಮೂರು ದಿನ ಮಾತ್ರ ಲೈಟಿಂಗ್ ಕೆಲವೊಂದು ದೇವಾಲಯಗಳಿಗೆ ಅಳವಡಿಸಲಾಗಿತ್ತು ಎಂದರು.
ಬೈ.ಶ್ರೀ. ಪ್ರಕಾಶ್ ಮಾತನಾಡಿ, ಈ ರೀತಿ ಗೊಂದಲ ಮೂಡದಿರಲು ಬೈಲಾ ತಿದ್ದುಪಡಿಯ ಅವಶ್ಯಕತೆ ಇದೆ ಎಂದು ಸಭೆಗೆ ತಿಳಿಸಿದರು.
ನೆರೆದಿದ್ದವರು ಆಡಿಟ್ ವರದಿ ತಯಾರಿಸಿ ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಮತ್ತೊಂದು ಸಭೆ ನಡೆಸುವಂತೆ ಒಕ್ಕೊರಲಿನ ತೀರ್ಮಾನ ಮಾಡಿದರು.
ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ರೂ. ೯೫ ಲಕ್ಷದ ಸರಕಾರ ಹಣದ ಖರ್ಚಿನ ಮಾಹಿತಿ ಈಗಾಗಲೇ ಕಳುಹಿಸಲಾಗಿದೆ. ವಂತಿಗೆ ಹಣದ ಒಪ್ಪಿಗೆ ಬೇಕಿರುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಸಭೆಯ ಸಲಹೆಯಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುನ್ನಡೆಯಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಮಾತನಾಡಿ, ದಸರಾ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗಿಲ್ಲ ಎಂದು ಸ್ಪಷ್ಟಪಡಿಸಿ, ವ್ಯವಸ್ಥಿತ ದಸರಾಕ್ಕೆ ಈಗಾಗಲೇ ಬೈಲಾ ಸಮಿತಿ ರಚಿಸಲಾಗಿದೆ ಎಂದರು.
ಯುವದಸರಾ ಸಮಿತಿಯ ಕವನ್ ಕೊತ್ತೋಳಿ ಮಾತನಾಡಿ, ಯುವ ದಸರಾಕ್ಕೆ ಸಂಗೀತ ಪರಿಕರ ಅಳವಡಿಕೆಗೆ ಸಲ್ಲಿಸಿದ ಬಿಲ್ ಬಗ್ಗೆ ಪ್ರಶ್ನಿಸಿದರು. ಸಮಿತಿ ಪ್ರಮುಖರು ಯುವ ದಸರಾ ಖರ್ಚಿನ ಕುರಿತು ಮಾಹಿತಿ ಒದಗಿಸುವಂತೆ ಹೇಳಿದರು. ಯುವ ದಸರಾಕ್ಕೆ ಒಂದು ರೂಪಾಯಿ ಕೂಡಾ ಅನುದಾನ ನೀಡಿಲ್ಲ ಎಂದು ಯುವ ದಸರಾ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಉತ್ತರಿಸಿದ ರಾಜೇಶ ಯಲ್ಲಪ್ಪ ಯುವ ದಸರಾ ಸಮಿತಿಯವರು ನೇರವಾಗಿ ದೇಣಿಗೆ ಸಂಗ್ರಹಿಸಿದ್ದು, ಅದರ ವಿವರ ನೀಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯದರ್ಶಿ ಲೋಕೇಶ್, ನಗರಸಭೆ ಪೌರಾಯುಕ್ತ ವಿಜಯ, ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ, ಎಸ್.ಸಿ. ಸತೀಶ್, ಸಬಿತಾ, ಶ್ವೇತಾ, ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್, ಮಾಜಿ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಸತೀಶ್ ಪೈ ಸೇರಿದಂತೆ ಇನ್ನಿತರರು ಹಾಜರಿದ್ದರು.