ಕುಶಾಲನಗರ, ಆ. ೨೧: ತಾ. ೩೧ ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಹೊಟೇಲ್ ಅಸೋಸಿಯೇಷನ್ ಆಶ್ರಯದಲ್ಲಿ ರಾಜ್ಯಮಟ್ಟದ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಹೊಟೇಲ್ ಉದ್ಯಮಿಗಳ ಸಮಸ್ಯೆಗಳನ್ನು ಚರ್ಚಿಸಿ ಸರಕಾರದ ಮುಂದಿಟ್ಟು ಪರಿಹಾ ರೋಪಾಯಗಳನ್ನು ಕಂಡುಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸ ಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಕೆ. ಶೆಟ್ಟಿ ತಿಳಿಸಿದರು.

ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಂತೆ ಹೊಟೇಲ್ ಉದ್ದಿಮೆದಾರರು ಕೂಡ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಘಟಕದ ಪ್ರಮುಖರು ಪ್ರತಿ ಜಿಲ್ಲೆಗಳಿಗೂ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ಸಂಘಗಳ ಪ್ರಮುಖರನ್ನು ಭೇಟಿ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ತಾ. ೩೧ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಉದ್ದಿಮೆದಾರರನ್ನು ಒಗ್ಗೂಡಿಸಿ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಿದ್ದೇವೆ. ಅಲ್ಲಿ ಸಿದ್ದಪಡಿಸುವ ಮಾರ್ಗಸೂಚಿಯನ್ವಯ ಸರಕಾರದಿಂದ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ ವಿ ರಾಘವೇಂದ್ರ ಮಾತನಾಡಿ, ರೈತರ ಬಹುಪಾಲು ಉತ್ಪನ್ನಗಳನ್ನು ಬಳಸಿಕೊಳ್ಳುವ ಮೂಲಕ ಕೃಷಿಕರಿಗೆ ಸಹಕಾರಿಯಾಗಿರುವ ಹೋಟೆಲ್ ಉದ್ಯಮ ಶತಮಾನಗಳಿಂದಲೂ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದೆ. ಜಾತಿ ಬೇಧ ನೋಡದೆ ಉದ್ಯೋಗವಕಾಶ ಒದಗಿಸುವ ಹೋಟೆಲ್ ಉದ್ಯಮಕ್ಕೆ ರಕ್ಷಣೆ ಆರ್ಥಿಕ ಭದ್ರತೆಯೊಂದಿಗೆ ಗೌರವ ಸಿಗುವಂತಾಗಬೇಕಿದೆ ಎಂದರು.

ಮೈಸೂರು ವಿಭಾಗದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ ತೆರಿಗೆ ಹೊರೆ ಹೋಟೆಲ್ ಉದ್ಯಮಗಳಿಗೆ ಅಧಿಕವಾಗಿದೆ. ವ್ಯಾಪಾರದಲ್ಲಿ ಅನಾರೋಗ್ಯಕರ ಪೈಪೋಟಿ ಇರುವ ಕಾರಣ ಆರ್ಥಿಕ ವ್ಯವಸ್ಥೆ ಏರುಪೇರು ಆಗುತ್ತಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಹೊಟೇಲ್ ಮಾಲೀಕರ ಕೊಡಗು ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮೂಲಕ ಸರಕಾರಕ್ಕೆ ಅತಿ ಹೆಚ್ಚಿನ ತೆರಿಗೆ ಪಾವತಿ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಗೆ ಒಂದು ತಿಂಗಳ ಅವಧಿಯಲ್ಲಿ ೧೦ ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಸತಿ ಗೃಹಗಳು ಅಗತ್ಯವಾದ ಅಂದಾಜು ೩೫,೦೦೦ ಕೊಠಡಿಗಳನ್ನು ಹೋಟೆಲ್ ಉದ್ಯಮ ನೀಡುವ ಮೂಲಕ ಸಾಧ್ಯವಾದಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ನಿರಂತರವಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಸಮಸ್ಯೆಗಳ ಪರಿಹಾರಕ್ಕೆ ತೊಡಕು ಉಂಟಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಖಜಾಂಚಿ ಗುರುರಾಜ್, ವಿಭಾಗೀಯ ಕಾರ್ಯದರ್ಶಿ ವಿಜಯ್ ಕುಮಾರ್, ಉಪಾಧ್ಯಕ್ಷ ರವಿ ಶಾಸ್ತ್ರಿ, ಉಪಾಧ್ಯಕ್ಷ ಜಹೀರ್ ಅಹ್ಮದ್, ಖಜಾಂಚಿ ಕೆ.ಕೆ. ಬಾಸ್ಕರ್, ಮೋಹನ್ ದಾಸ್, ಜೆ.ವಿ. ಕೋಟಿ ಸಿದ್ದಲಿಂಗೇಶ್ವರ ಮತ್ತಿತರರು ಹಾಜರಿದ್ದರು.