ಗೋಣಿಕೊಪ್ಪಲು, ಆ.೨೦: ಮಧ್ಯಾಹ್ನದ ವೇಳೆ ಮನೆಯ ಸಮೀಪ ವಿರುವ ತೋಟದ ರಸ್ತೆಯ ಬಳಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು ಹಸುವನ್ನು ಹುಲಿಯು ಕೊಂದು ಹಾಕಿದೆ.

ದ.ಕೊಡಗಿನ ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿತೀರ ರವಿ ಎಂಬವರಿಗೆ ಸೇರಿದ ಹಸುವನ್ನು ಹುಲಿ ಬಲಿತೆಗೆದುಕೊಂಡಿದ್ದು, ಸ್ಥಳಕ್ಕೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡ ಳಿಯ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ, ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಹುಲಿ ಸೆರೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದರು.

ಈ ಭಾಗದಲ್ಲಿ ಹುಲಿಯ ಸಂಚಾರವಿರುವುದನ್ನು ಖಚಿತಪಡಿಸಿ ಕೊಳ್ಳಲು ಹುಲಿಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಅರಣ್ಯ ಸಿಬ್ಬಂದಿಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ. ಹುಲಿ ಪತ್ತೆ ಆದರೆ ಬೋನನ್ನು ಸ್ಥಳದಲ್ಲಿ ಅಳವಡಿಸಲಾಗುವುದು. ಹಸುವನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಲು ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ಆದಷ್ಟು ಬೇಗ ಪರಿಹಾರದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿ ಗುರುರಾಜ್ ಮಾಹಿತಿ ನೀಡಿದರು.

ಕಾಫಿ ತೋಟದ ಸಮೀಪದಲ್ಲಿ ದಟ್ಟವಾದ ಅರಣ್ಯ ಪ್ರದೇಶವಿದ್ದು ಈ ಭಾಗದಲ್ಲಿ ಹುಲಿಯು ನೆಲೆಸಿರುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ನಾಗರಿಕರು ಓಡಾಟ ನಡೆಸದಂತೆ ಎಚ್ಚರ ವಹಿಸುವ ಸಲುವಾಗಿ ಘಟನೆ ಸ್ಥಳದ ಅನತಿ ದೂರದಲ್ಲಿ ಸಿಬ್ಬಂದಿಗಳನ್ನು ಅರಣ್ಯ ಇಲಾಖೆಯ ವತಿಯಿಂದ ನಿಯೋಜಿಸಲಾಗಿದೆ.

ಈ ಸಂದರ್ಭ ಶ್ರೀಮಂಗಲ ವಲಯ ಕಾಂಗ್ರೆಸ್‌ನ ಅಧ್ಯಕ್ಷ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪಲ್ವಿನ್ ಪೂಣಚ್ಚ, ನಾಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಾಡು ಸೋಮಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಬಿ. ಗಣೇಶ್, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷÀ ತೀತಿರ ಕಟ್ಟಿ, ಕೆ.ಬಾಡಗ ವಲಯ ಅಧ್ಯಕ್ಷ ಚಿಮ್ಮಣಮಾಡ ರವಿ ಪ್ರಮುಖರಾದ ಕಟ್ಟೆಮಾನೆರ ನೀಲು, ಮುಕ್ಕಾಟಿರ ದೀಪು, ಕಳ್ಳಿಚಂಡ ಅಪ್ಪಣ್ಣ, ಚೇಮಿರ ಗಿರೀಶ್ ಗ್ಯಾರಂಟಿ ಸಮಿತಿಯ ಸದಸ್ಯರಾದ ಪರಮಾಲೆ ಗಣೇಶ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ.ಜಗದೀಶ್