ಕೂಡಿಗೆ, ಆ. ೧೬: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಕೊಡಗಿನ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬೆಳೆ ನೆಲಕಚ್ಚಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯ ೧೨ ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ಭಾಗದ ರೈತರು ಮಳೆಯನ್ನೇ ಅವಲಂಬಿಸಿ ಮೆಕ್ಕೆಜೋಳದ ಬೆಳೆಯನ್ನು ಬೆಳೆಯುತ್ತಾರೆ. ಈ ಸಾಲಿನಲ್ಲಿ ಜೂನ್ ತಿಂಗಳಲ್ಲಿ ಸಣ್ಣ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಅರೆ ಮಲೆನಾಡು ಪ್ರದೇಶದ ರೈತರು ಭೂಮಿಯನ್ನು ಉಳುಮೆ ಮಾಡಿ, ಅದಕ್ಕೆ ಬೇಕಾಗುವ ಸಾವಯವ ಗೊಬ್ಬರ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ ಜಮೀನಿನ ಮಣ್ಣನ್ನು ಪರೀಕ್ಷಿಸಿ ನಂತರ ಅಧಿಕಾರಿಗಳ ಸೂಚನೆಯಂತೆ ಜಮೀನಿಗೆ ರಂಜಕ ಮತ್ತು ಸುಣ್ಣವನ್ನು ಹಾಕಿ ಉಳುಮೆ ಮಾಡಿ ಸಿದ್ಧತೆ ನಡೆಸಿದ್ದರು. ನಂತರ ಕಡಿಮೆ ಪ್ರಮಾಣದ ಮಳೆಯ ಅಧಾರದ ಮೇಲೆ ಕಳೆದ ತಿಂಗಳುಗಳಲ್ಲಿ ನೂರಾರು ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ. ಆದರೆ ನಂತರದಲ್ಲಿ ಅಧಿಕವಾದ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯು ಸಮರ್ಪಕವಾಗಿ ಜಮೀನಿನಲ್ಲಿ ಹುಟ್ಟದೇ ಕರಗುವುದರ ಜೊತೆಯಲ್ಲಿ ನಷ್ಟವಾಗಿದೆ. ಬೆಳೆ ಅರ್ಧ ಅಡಿಗಳಷ್ಟು ಎತ್ತರದಲ್ಲಿ ಬೆಳೆದರೂ ಮಳೆಯಿಂದಾಗಿ ಯಾವುದೇ ಗೊಬ್ಬರ ಅಥವಾ ಬೇಸಾಯ ಮಾಡಲೂ ಸಾಧವಾಗುತ್ತಿಲ್ಲ. ಇದರಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ನೆಲ Àಕಚ್ಚಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ಶಿರಂಗಾಲ, ಅಳುವಾರ, ಸಿದ್ದಲಿಂಗಪುರ, ಸೀಗೆಹೊಸೂರು, ಚಿಕ್ಕತ್ತೂರು, ದೊಡ್ಡತ್ತೂರು, ೬. ನೇ ಹೊಸಕೋಟೆ, ಸೇರಿದಂತೆ ೨೫ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಹೈಬ್ರೀಡ್ ತಳಿಯ ಮೆಕ್ಕೆಜೋಳದ ಬಿತ್ತನೆ ಕಾರ್ಯ ನಡೆದರೂ ಈ ಸಾಲಿನಲ್ಲಿ ಹೆಚ್ಚಾಗಿ ಮಳೆ ಬಿದ್ದ ಪರಿಣಾಮವಾಗಿ ಮೆಕ್ಕೆಜೋಳ ಬೆಳೆಯು ತೀರಾ ಹಾಳಾಗಿದೆ.

ಕ್ಷೀಣವಾಗಿರುವ ಮೆಕ್ಕೆಜೋಳದ ಬೆಳೆಗಳನ್ನು ಉಳುಮೆ ಮಾಡಿ ಬದಲಿ ಬೇಸಾಯ ಮಾಡಲು ಸಹ ಅಗುತ್ತಿಲ್ಲ. ಈಗಾಗಲೇ ಈ ವ್ಯಾಪ್ತಿಯ ರೈತರು ಸ್ಥಳಿಯ ಸಹಕಾರ ಸಂಘಗಳ ಮೂಲಕ ಲಕ್ಷಾಂತರ ರೂ.ಗಳನ್ನು ಸಾಲ ಪಡೆದು ಮೆಕ್ಕೆಜೋಳದ ಬೇಸಾಯ ಮಾಡಿದರೂ ಮೆಕ್ಕೆಜೋಳದ ಬೆಳೆ ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆಯವರು ಸ್ಧಳ ಪರಿಶೀಲನೆ ನಡೆಸಿ ಬೆಳೆ ಹಾಳಾಗಿರುವ ಎಲ್ಲಾ ರೈತರಿಗೆ ಪರಿಹಾರವನ್ನು ಒದಗಿಸುವಂತೆ ಈ ವ್ಯಾಪ್ತಿಯ ನೂರಾರು ರೈತರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ