ವೀರಾಜಪೇಟೆ, ಆ. ೧೬: ಐತಿಹಾಸಿಕ ವೀರಾಜಪೇಟೆ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ವೇಳೆ ಮಿತಿಮೀರಿದ ಧ್ವನಿವರ್ಧಕ ಬಳಕೆ ಮಾಡದಂತೆ ವೀರಾಜಪೇಟೆ ಡಿ.ವೈ.ಎಸ್.ಪಿ. ಮೋಹನ್ ಕುಮಾರ್ ಎಚ್ಚರಿಸಿದ್ದು, ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ವೀರಾಜಪೇಟೆ ಐತಿಹಾಸಿಕ ಗೌರಿ ಗಣೇಶೋತ್ಸವ ನಗರ ಮತ್ತು ಗ್ರಾಮಾಂತರ ಪ್ರದೇಶದ ಉತ್ಸವ ಸಮಿತಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಬ್ಬರದ ಸಂಗೀತ ಡಿ.ಜೆ. ಸೇರಿದಂತೆ ನಿಗದಿಕ್ಕಿಂತ ಹೆಚ್ಚಿನ ‘ಡಿಸಿಬಲ್’ ಶಬ್ದ ಬಳಸುವಂತಿಲ್ಲ ಎಂದು ತಾಕೀತು ಮಾಡಿದರು.

ಉಚ್ಚ ನ್ಯಾಯಾಲಯದ ಆದೇಶದಂತೆ ಉತ್ಸವ ಸಮಯದಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಕೆಲವು ನಿಬಂಧನೆಗಳಿವೆ. ವಸತಿ ಪ್ರದೇಶ, ಕೈಗಾರಿಕಾ ಬಡಾವಣೆಗಳು, ವಾಣಿಜ್ಯ ಪ್ರದೇಶಗಳು. ನಿಶ್ಯಬ್ದ ಪ್ರದೇಶಗಳು ಎಂದು ವಿಂಗಡಿಸಲಾಗಿದ್ದು, ಇಂತಹ ಸ್ಥಳಗಳಲ್ಲಿ ಅಬ್ಬರದ ಸಂಗೀತ ಪರಿಕರಗಳಿಂದ ಹೊರಹೊಮ್ಮುವ ಶಬ್ದಗಳಿಗೆ ಕಾನೂನಾತ್ಮಕವಾಗಿ ಮಿತಿಯನ್ನು ನಿಗದಿಗೊಳಿಸಿದೆ. ನಿಗದಿತ ಮಿತಿಯನ್ನು ಮೀರಿ ಶಬ್ದ ಪ್ರಯೋಗವಾದ್ದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಾಶ್ಚಾತ್ಯ ಸಂಗೀತವನ್ನು ಬದಿಗೊತ್ತಿ ದೇಶದ ಸಂಸ್ಕೃತಿಗಳನ್ನು ಬಿಂಬಿಸುವ, ವಾದ್ಯಗಳಿಗೆ ಒತ್ತು ನೀಡಿ. ಅಲ್ಲದೆ ಪರಿಸರ ಕಾಳಜಿಯಿಂದ ಮಣ್ಣಿನಿಂದ ತಯಾರಿಸಿದ ಉತ್ಸವ ಮೂರ್ತಿಗಳನ್ನು ಬಳಸಿ ಎಂದು ಉತ್ಸವ ಸಮಿತಿಗಳಿಗೆ ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಮಾತನಾಡಿ, ಉತ್ಸವ ಮೂರ್ತಿಯನ್ನು ಪ್ರತಿಷ್ಠೆ ಮಾಡುವ ಸ್ಥಳದ ಬಗ್ಗೆ ಖಾಸಗಿ ಸ್ಥಳ ಅಥವಾ ಇತರ ಸ್ಥಳದ ಮಾಲೀಕರಿಂದ ನಿರಪೇಕ್ಷಣಾ ಪತ್ರ ಒದಗಿಸಬೇಕು. ವಿದ್ಯುತ್ ಅಳವಡಿಕೆಯಿಂದ ಅವಘಡಗಳು ಸಂಭವಿಸದAತೆ ಕ್ರಮ ವಹಿಸಬೇಕು. ಉತ್ಸವ ಮೂರ್ತಿ ಇರುವ ಸ್ಥಳದಲ್ಲಿ ಸಮಿತಿಯಿಂದ ಸೂಕ್ತ ಭದ್ರತೆ ಕಲ್ಪಿಸಿ ಇಲಾಖೆಯೊಂದಿಗೆ ಕೈಜೋಡಿಸಬೇಕು. ಅಲ್ಲದೆ ಕಳ್ಳತನ ತಡೆÀ ಹಿತದೃಷ್ಟಿಯಿಂದ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕು. ಉತ್ಸವ ಮೂರ್ತಿ ವಿಸರ್ಜನೆ ವೇಳೆ ಮುಂಗಡವಾಗಿ ಸಮಯದ ಸಂಪೂರ್ಣ ಮಾಹಿತಿ ಇಲಾಖೆಗೆ ಒದಗಿಸಬೇಕು. ಉತ್ಸವ ಸಮಯದಲ್ಲಿ ಕಾರ್ಯಕ್ರಮಗಳ ಅಯೋಜನೆಯ ಬಗ್ಗೆ ಪೂರ್ವ ಮಾಹಿತಿ ಇಲಾಖೆಗೆ ಒದಗಿಸಬೇಕು. ಕಾನೂನು ರೀತಿ ನೀತಿಯನ್ನು ಪ್ರತಿಯೊಂದು ಸಮಿತಿ ಪರಿಪಾಲನೆ ಮಾಡುವುದರೊಂದಿಗೆ ಇಲಾಖೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿ ಎಂದರು.

ಸಭೆಯಲ್ಲಿ ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಹೆಚ್.ಎನ್., ಅಪರಾಧ ವಿಭಾಗದ ಠಾಣಾಧಿಕಾರಿ ವಾಣಿಶ್ರೀ ಬಿ.ಎಸ್. ಗ್ರಾಮಾಂತರ ಠಾಣಾಧಿಕಾರಿ ಸಿ.ಸಿ. ಮಂಜುನಾಥ್ ಉಪಸ್ಥಿತರಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ