ಮಡಿಕೇರಿ, ಆ. ೧೬: ಹುದಿಕೇರಿಯಲ್ಲಿನ ಶಾಸಕ ಎ.ಎಸ್. ಪೊನ್ನಣ್ಣ ಅವರ ಜಮೀನಿನಲ್ಲಿ ಭತ್ತದ ಯಾಂತ್ರೀಕೃತ ನಾಟಿಯ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿಕೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ, ಅರಣ್ಯ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಪೊನ್ನಂಪೇಟೆ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು ಇವರ ಸಂಯುಕ್ತಾಶ್ರ ಯದಲ್ಲಿ ಹಮ್ಮಿ ಕೊಳ್ಳಲಾಗಿತ್ತು. ಇದರ ಅಂಗವಾಗಿ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಓಟ ಹಾಗೂ ಭತ್ತ ನಾಟಿ ಸ್ಪರ್ಧೆ ಯನ್ನೂ ಸಹ ಆಯೋಜಿಸಲಾಗಿತ್ತು.

ಆಟೋಟ ಮತ್ತು ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳಿಗೆ ಶಾಸಕರು ಚಾಲನೆ ನೀಡಿದರು. ಭತ್ತ ನಾಟಿ, ಎರಚು ಪದ್ಧತಿಯಲ್ಲಿ ಭತ್ತದ ಬಿತ್ತನೆ ಹಾಗೂ ಯಾಂತ್ರೀಕೃತ ನಾಟಿಯ ಬಗ್ಗೆ ನೆರೆದ ರೈತರು ಸಮಗ್ರ ಮಾಹಿತಿ ಪಡೆದುಕೊಂಡರು. ಈ ಎಲ್ಲಾ ಚಟು ವಟಿಕೆಗಳಲ್ಲಿ ಶಾಸಕರು ಪಾಲ್ಗೊಂಡು ಎಲ್ಲರಿಗೂ ಮಾದರಿಯಾದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ತೋರಿಸಿಕೊಟ್ಟರು. ಶಾಸಕರೂ ಸೇರಿದಂತೆ

(ಮೊದಲ ಪುಟದಿಂದ)' ಉಪಸ್ಥಿತರಿದ್ದ ಗಣ್ಯರೆಲ್ಲರೂ ಭತ್ತ ನಾಟಿ, ಬೀಜ ಬಿತ್ತನೆ ಹಾಗೂ ಯಾಂತ್ರಿಕೃತ ನಾಟಿಯಲ್ಲಿ ಪಾಲ್ಗೊಂಡಿದ್ದರು.

ನಾಟಿಯ ಮೊದಲು ನಡೆದ ಕೆಸರುಗದ್ದೆ ಆಟೋಟದಲ್ಲಿ ಹುದಿಕೇರಿಯ ಲಿಟಲ್ ಪ್ಲವರ್ ಶಾಲೆಯ ಹಾಗೂ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿ ಗಳಿಗೆ ಶಾಸಕರು ಬಹುಮಾನ ವಿತರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆÀಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಘಟಕದ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ಭತ್ತ ಕೃಷಿಯಿಂದ ರೈತರು ವಿಮುಖಗೊಳ್ಳುತ್ತಿರುವುದನ್ನು ತಡೆಯಲು, ಭತ್ತ ಬೇಸಾಯದ ಖರ್ಚನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಜನ ಪ್ರತಿನಿಧಿಯೊಬ್ಬರು ತಾವೇ ಮುಂದೆ ಬಂದು ಈ ರೀತಿಯ ಚಟುವಟಿಕೆಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಯಾರೂ ಕೂಡ ತಮ್ಮ ಭತ್ತದ ಗದ್ದೆಗಳನ್ನು ಪಾಳುಬಿಡಬಾರದು, ಹೊಸ ಹೊಸ ರೀತಿಯ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಭತ್ತದ ಬೆಳೆ ಬೆಳೆಯುವುದನ್ನು ಲಾಭದಾಯಕವಾಗಿ ಮಾಡಿ ಕೊಳ್ಳಬಹುದು. ಕೊಡಗಿನಲ್ಲಿ ಭತ್ತ ಕೃಷಿಯ ಪುನಶ್ಚೇತನ ಇಂದಿನ ಅಗತ್ಯಗಳಲ್ಲೊಂದು ಎಂದ ಅವರು ಕಳೆದ ಬಾರಿ ಸೋಮೇಂಗಡ ತಿಮ್ಮಯ್ಯ ಅವರ ಗದ್ದೆಯಲ್ಲಿ ಯಾಂತ್ರೀಕೃತ ನಾಟಿ ಕೈಗೊಂಡಾಗ ಇದೇ ಪದ್ಧತಿಯಲ್ಲಿ ನಮ್ಮ ಜಮೀನಿನಲ್ಲಿಯೂ ಭತ್ತ ಬೆಳೆಯುವ ಆಸಕ್ತಿ ಮೂಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನನ್ನಂತೆಯೇ ಹೆಚ್ಚು ಹೆಚ್ಚು ಜನ ಈ ವಿಧಾನಗಳ ಉಪಯುಕ್ತತೆ ತಿಳಿದುಕೊಂಡು ಭತ್ತ ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರಣ್ಯ ಮಹಾ ವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅವರು ಭತ್ತ ಬೆಳೆಯುವುದನ್ನು ಯಾವುದೇ ಕಾರಣಕ್ಕೂ ಬಿಡಬಾರದು, ಹೊಸ ಹೊಸ ತಂತ್ರಜ್ಞಾನಗಳು ಇದ್ದು ತಾಂತ್ರಿಕ ಮಾಹಿತಿ ನೀಡಲು ವಿಸ್ತರಣಾ ಶಿಕ್ಷಣ ಘಟಕ, ಕೆ.ವಿ.ಕೆ ಹಾಗೂ ಕೃಷಿ ಇಲಾಖೆಗಳಿವೆ, ಅವುಗಳ ನಿಕಟ ಸಂಪರ್ಕದಲ್ಲಿ ರೈತರು ಇರಬೇಕು. ಸಾಧ್ಯವಾದಷ್ಟು ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿದಲ್ಲಿ ಕೃಷಿಯಲ್ಲಿ ನಷ್ಟ ಎನ್ನುವುದು ಇರುವುದಿಲ್ಲ. ಕೊಡಗು ಕೃಷಿ ವಿಜ್ಞಾನಗಳ ವೇದಿಕೆಯು ಸಹ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು ವರ್ಷದಿಂದ ವರ್ಷಕ್ಕೆ ಭತ್ತದ ಬೆಳೆಯ ಕ್ಷೇತ್ರವನ್ನು ವಿಸ್ತರಿಸುವ ಗುರಿ ಹೊಂದಿದೆ ಎಂದು ತಿಳಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರು, ಯಾಂತ್ರೀಕೃತ ಭತ್ತ ನಾಟಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡು ಭತ್ತ ಬೇಸಾಯ ಲಾಭದಾಯಕ ಎಂದು ಮನದಟ್ಟಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಇತರ ಪ್ರಮುಖರಾದ ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್, ಪ್ರಗತಿಪರ ಕೃಷಿಕ ರವಿಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೆರ ಕುಶಾಲಪ್ಪ ಹಾಗೂ ಕೆ.ವಿ.ಕೆ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಕಾವೇರಿ ಕಾಲೇಜು ಗೋಣಿಕೊಪ್ಪ ಉಪನ್ಯಾಸಕ ಅಕ್ರಂ ನಿರೂಪಿಸಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗೌರಿ ವಂದಿಸಿದರು.