ಗೋಣಿಕೊಪ್ಪಲು, ಆ. ೧೬: ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಿಂದಲೇ, ಗ್ರಾಮಸ್ಥರ ಸಮ್ಮುಖದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಸದಸ್ಯರಾದ ಸಂಕೇತ್ ಪೂವಯ್ಯ ಸುದೀರ್ಘ ಚರ್ಚೆ ನಡೆಸಿದರು.

ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ಪಾಲಂಗಾಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ವನ್ಯಜೀವಿ ಮಾನವ ಸಂಘರ್ಷ ಬಗ್ಗೆ ಗ್ರಾಮಸ್ಥರು ತಮ್ಮ ನೋವನ್ನು ಸಭೆಯಲ್ಲಿ ತೋಡಿಕೊಂಡಿ ರುವುದನ್ನು ಆಲಿಸಿದ್ದೇನೆ. ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಉನ್ನತಮಟ್ಟದ ಸಭೆಯು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜರುಗಿದೆ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡಗಿನ ಆನೆ - ಮಾನವ ಸಂಘರ್ಷದ ಬಗ್ಗೆ ಸಮಗ್ರ ಮಾಹಿತಿ ಮಂಡಿಸಿದ್ದಾರೆ ಎಂದು ಪೂವಯ್ಯ ಹೇಳಿದರು.

ಇದೀಗ ಹೊಸ ತಂತ್ರಜ್ಞಾನದೊAದಿಗೆ ಆನೆ - ಮಾನವ ಸಂಘರ್ಷ ತಡೆಯಲು ಎಲ್ಲಾ ಪ್ರಯತ್ನ ಸರ್ಕಾರ ಕೈಗೊಂಡಿದೆ. ಕೊಡಗಿನಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹಲವು ಅಭಿಪ್ರಾಯವನ್ನು ವನ್ಯಜೀವಿ ಸಂರಕ್ಷಣಾ

(ಮೊದಲ ಪುಟದಿಂದ) ಮಂಡಳಿ ವತಿಯಿಂದ ಈಗಾಗಲೇ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ.

ಕಳೆದ ೨೫ ವರ್ಷಗಳಿಂದ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಮುಂದೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಈ ನಿಟ್ಟಿನಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕು. ಈ ಹಿಂದೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು, ತಮ್ಮ ಪ್ರಣಾಳಿಕೆಯಲ್ಲಿ ವಿಷಯ ಮಂಡಿಸಿದ್ದರು. ಈ ಬಗ್ಗೆ ಶಾಸಕರಾದ ನಂತರ, ವಿಧಾನ ಸಭೆಯಲ್ಲಿ ವಿಷಯ ಮಂಡಿಸಿ, ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.

ಕ್ಷೇತ್ರಕ್ಕೆ ಅರಣ್ಯ ಸಚಿವರನ್ನು ಬರಮಾಡಿಕೊಂಡು ಇಲ್ಲಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ವಿಚಾರ ಸಂಕಿರಣ ನಡೆಸಲಾಗಿದೆ. ಈ ಸಂದರ್ಭ ಪ್ರಮುಖವಾಗಿ ಶಾಸಕ ಪೊನ್ನಣ್ಣ ಅವರು ಕೊಡಗಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದರು.

ಕಾಡಾನೆಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡವರು, ಅಂಗ ವೈಫಲ್ಯ ಹೊಂದಿದವರು ಗ್ರಾಮದಲ್ಲಿ ಇದ್ದಾರೆ. ಘಟನೆ ನಡೆದ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸುತ್ತಾರೆ. ಇದರಿಂದ ಸಮಸ್ಯೆಗೆ ಪರಿಹಾರ ಇನ್ನೂ ಸಂಪೂರ್ಣವಾಗಿ ದೊರೆತಿಲ್ಲ. ಭಯದ ವಾತಾವರಣದ ನಡುವೆ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡರು.

ಗ್ರಾಮದ ಹಿರಿಯರಾದ ಕರಿನೆರವಂಡ ಜಾಲು ಚಂಗಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವೀರಾಜಪೇಟೆ ಡಿಎಫ್‌ಓ ಜಗನಾಥ್ ಮಾತನಾಡಿ, ೪ ತಿಂಗಳ ಹಿಂದೆ ವೀರಾಜಪೇಟೆ ಕಚೇರಿಗೆ ಆಗಮಿಸಿ, ಜವಾಬ್ದಾರಿ ವಹಿಸಿಕೊಂಡಿದ್ದೇವೆ. ಹಲವು ಬಾರಿ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿರುವೆ, ಈಗಾಗಲೇ ಕಾಡಾನೆಗಳ ಗಣತಿ ಕಾರ್ಯ ಆಗಿದೆ ೧೦೯ ಕಾಡಾನೆಗಳಿವೆ. ಐದು ಕಾಡಾನೆಗಳು ಅರಣ್ಯದಲ್ಲಿ ಇದ್ದವು.! ಉಳಿದವುಗಳು ಗ್ರಾಮದ ರೈತರ ಕಾಫಿ ತೋಟದಲ್ಲಿ ನೆಲೆ ನಿಂತಿವೆ.

ಹಲವು ಗ್ರಾಮಗಳಲ್ಲಿ ಕಾಡಾನೆಗಳು ತೋಟಕ್ಕೆ ಆಗಮಿಸಿದ್ದ ವೇಳೆ ಕೆಲವು ಆನೆಗಳಿಗೆ ಗುಂಡು ಹಾರಿಸಿರುವುದು ಬೆಳಕಿಗೆ ಬಂದಿದೆ. ಇದು ಮನಸ್ಸಿಗೆ ನೋವು ತಂದಿದೆ ಎಂದ ಡಿಎಫ್‌ಓ ಮರಣೋತ್ತರ ಪರೀಕ್ಷೆ ವೇಳೆ ಈ ಬಗ್ಗೆ ದೃಢಪಟ್ಟಿದೆ ಎಂದು ಮಾಹಿತಿಯಿತ್ತರು.

ಸರಕಾರದ ವತಿಯಿಂದ ಸಿಗುವ ಪರಿಹಾರವನ್ನು ಸಕಾಲದಲ್ಲಿ ನೀಡಲಾಗುತ್ತಿದೆ. ಲಭ್ಯ ಇರುವ ಇಲಾಖೆಯ ಸಿಬ್ಬಂದಿಗಳು ಘಟನೆ ನಡೆದ ಸಂದರ್ಭದಲ್ಲಿ ಸಕಾಲದಲ್ಲಿ ಸ್ಥಳಕ್ಕೆ ತಲುಪುತ್ತಿದ್ದಾರೆ. ಮಕ್ಕಳಿಗೆ ಶಾಲೆಗೆ ಹೋಗಲು ಇಲಾಖೆಯ ವತಿಯಿಂದ ವಾಹನಗಳ ವ್ಯವಸ್ಥೆ ಮಾಡುತ್ತೇವೆ. ತೀವ್ರ ಅಗತ್ಯವಿರುವ ಕಡೆಯಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

ಸ್ಥಳೀಯ ಗ್ರಾಮ ಪಂಚಾಯತಿ ಅದನ್ನು ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯಿದೆ. ಇಲಾಖೆಯ ಸಿಬ್ಬಂದಿಗಳು ದಿನ ಪೂರ್ತಿ ಕೆಲಸ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ. ಸ್ಥಳೀಯರ ಸಹಕಾರ ಅಗತ್ಯ ಬೇಕಾಗಿದೆ. ರೈತರು ಮುಂದೆ ಬಂದರೆ, ಇಲಾಖೆಯ ವತಿಯಿಂದ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ. ಸೋಲಾರ್ ದೀಪ ಅಳವಡಿಸಲು ಹಾಗೂ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರ ಪ್ರಶ್ನೆಗಳಿಗೆ ಡಿಎಫ್‌ಓ ಜಗನಾಥ್ ಉತ್ತರಿಸಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ ಕಾಡಾನೆಗಳ ಉಪಟಳ ತಾಳಲಾರದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಸಮಸ್ಯೆಗೆ ಪರಿಹಾರ ಒದಗಿಸುವುದು ಆದಷ್ಟು ಬೇಗನೆ ಮಾಡಬೇಕೆಂದು ಅಧಿಕಾರಿಗಳ ಗಮನ ಸೆಳೆದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಮೇಶ್ವರ ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಗ್ರಾಮಸ್ಥರಾದ ಕರಿನೆರವಂಡ ಡ್ಯಾನಿ, ಜಿತನ್, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಗ್ರಾಮಸ್ಥರಾದ ನಡಿಕೇರಿಯಂಡ ಮಹೇಶ್ ಸ್ವಾಗತಿಸಿ, ವಂದಿಸಿದರು. ಗ್ರಾಮಸ್ಥರು ಸ್ಥಳೀಯ ಸಮಸ್ಯೆ ಬಗ್ಗೆ ಸಂಕೇತ್ ಪೂವಯ್ಯ ನವರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದ ಅನೇಕ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್