ಕಣಿವೆ, ಆ. ೧೩: ನಿತ್ಯವೂ ಕಾಡಾನೆಗಳ ಕಾಟದಿಂದ ನೊಂದು ಬೇಯುತ್ತಿದ್ದ ಹಾರಂಗಿ ಬಳಿಯ ಅತ್ತೂರು ಗ್ರಾಮಸ್ಥರ ಅನುಕೂಲಕ್ಕೆಂದು ಕಳೆದ ಕೆಲವೇ ದಿನಗಳ ಹಿಂದೆ ಅಳವಡಿಸಿದ್ದ ಏಳು ಕೋಟಿ ವೆಚ್ಚದ ರೈಲ್ವೆ ಕಂಬಿ ಅಳವಡಿಕೆ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಇಲಾಖೆಯು ನಿರ್ಮಿಸಿದ ಅವೈಜ್ಞಾನಿಕ ರೈಲ್ವೆ ಕಂಬಿ ಜೋಡಣೆಗಳಲ್ಲಿ ಬೋಲ್ಟು ನೆಟ್ಟುಗಳನ್ನೇ ಅಳವಡಿಸಿಲ್ಲ. ಅಧಿಕಾರಿಗಳು ಈ ಕಾಮಗಾರಿಯ ಉಸ್ತುವಾರಿಯನ್ನು ಮಾಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದು ಕಾಡಾನೆಗಳ ಹಾವಳಿಯನ್ನು ತಡೆಯದ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ರಾತ್ರಿ ಕಾಡಾನೆ ಯೊಂದು ಬೋಲ್ಟು ನೆಟ್ಟುಗಳಿಲ್ಲದ ಕಂಬಿಯನ್ನು ಮುರಿದು ತಳ್ಳಿ ಒಳ ತೆರಳಿ ರೈತರು ಬೆಳೆದಿದ್ದ ಫಸಲನ್ನು ತಿಂದು ನಷ್ಟ ಉಂಟುಮಾಡಿದೆ ಎಂದು ಅತ್ತೂರಿನ ಪ್ರಗತಿಪರ ಕೃಷಿಕ ಜರ್ಮಿಡಿಸೋಜಾ, ಮನೋಜ್, ನರೇಂದ್ರ, ರವಿ, ಶ್ರೀನಿವಾಸ್ ಮೊದಲಾದವರು ದೂರಿದ್ದಾರೆ.

ಕಾಡಾನೆಗಳ ನಿಗ್ರಹಕ್ಕೆಂದು ರೈಲ್ವೆ ಕಂಬಿ ಅಳವಡಿಸುವ ಯೋಜನೆ ರೂಪಿಸಿದ ಮೇಲೆ ವೈಜ್ಞಾನಿಕವಾದ ಹಾಗೂ ಗುಣಮಟ್ಟದ ಕಾಮಗಾರಿಗಳನ್ನು ಮಾಡಿಲ್ಲ.

ಈ ಕಾಮಗಾರಿಯ ವೈಫಲ್ಯದ ಬಗ್ಗೆ ಅರಣ್ಯ ಮಂತ್ರಿಗಳ ಬಳಿ ನಿಯೋಗ ತೆರಳಿ ದೂರು ಸಲ್ಲಿಸುವ ಬಗ್ಗೆಯೂ ಅವರುಗಳು ತಿಳಿಸಿದ್ದಾರೆ.

- ಕೆ.ಎಸ್. ಮೂರ್ತಿ