*ಗೋಣಿಕೊಪ್ಪ, ಆ. ೧೧: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೊನ್ನಂಪೇಟೆ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನವಾಗಿ ಬೃಹತ್ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸಿ.ಕೆ ಬೋಪಣ್ಣ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ೧೪ರಂದು ಬುಧವಾರ ‘ಇದೇ ನಮ್ಮ ಸಂಕಲ್ಪ ಇದೇ ನಮ್ಮ ಗುರಿ' ಎಂಬ ಉದ್ದೇಶದೊಂದಿಗೆ ಅಖಂಡ ಭಾರತ ನಿರ್ಮಾಣದ ಸಂಕಲ್ಪಕ್ಕಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಯಲಿದೆ.
ಅಂದು ಸಂಜೆ ಆರು ಗಂಟೆಗೆ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ಶ್ರೀ ಉಮಾಮಹೇಶ್ವರಿ ದೇವಸ್ಥಾನದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ.
ಬಲಿಷ್ಠ ಹಿಂದೂ ರಾಷ್ಟç ನಿರ್ಮಾಣದ ಸಂಕಲ್ಪಕ್ಕೆ ಮತ್ತು ೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿ ಅಖಂಡ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟು ದೇಶ ವಿಭಜನೆಗೊಂಡ ಆ ಕರಾಳ ರಾತ್ರಿಯ ದುರಂತವನ್ನು ಇಂದಿನ ಸಮಾಜ ಬಾಂಧವರಲ್ಲಿ ನೆನಪಿಸುವ ಮತ್ತು ಕಳೆದು ಹೋಗಿರುವ ಭೂಭಾಗಗಳನ್ನು ಮತ್ತೆ ಒಂದುಗೂಡಿಸುವ ಪ್ರಯತ್ನದ ಸಂಕಲ್ಪಕ್ಕಾಗಿ ಪಂಜಿನ ಮೆರವಣಿಗೆಯನ್ನ ನಡೆಸಲಾಗುತ್ತಿದೆ.
ವಿಶ್ವ ಹಿಂದೂ ಪರಿಷತ್ ಗೋಣಿಕೊಪ್ಪ ಘಟಕದ ಅಧ್ಯಕ್ಷ ಎನ್ ಆರ್ ಅಮೃತರಾಜ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತರಾಗಿರುವ ಕರ್ನಲ್ ಕೆ.ಸಿ ಸುಬ್ಬಯ್ಯ (ನಿ) ಮುಖ್ಯ ಅತಿಥಿಗಳಾಗಿ ಮುಖ್ಯ ಭಾಷಣಗಾರರಾಗಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್ ಉಪಸ್ಥಿತಿಯಲ್ಲಿರುವರು ಎಂದು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಪೊನ್ನಂಪೇಟೆ ಪ್ರಖಂಡ ಸಂಚಾಲಕ ಪದ್ಯಂಡ ಹರೀಶ್ ಇದ್ದರು.