ಸೋಮವಾರಪೇಟೆ, ಆ. ೯: ಇಲ್ಲಿನ ರೋಟರಿ ಸಂಸ್ಥೆ ವತಿಯಿಂದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಗೌಡಳ್ಳಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಕಿ ಸ್ಟಿಕ್ ಸೇರಿದಂತೆ ಇತರ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು.
ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ ರೋಟರಿ ಸಂಸ್ಥೆ ಅಧ್ಯಕ್ಷ ಪೊನ್ನಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲೂ ಸಾಧನೆ ಮಾಡಬೇಕು ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಆನಂದಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದಾನಿಗಳು ಹೆಚ್ಚು ನೆರವು ನೀಡಿದಲ್ಲಿ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಯಾಗಲಿದೆ. ರೋಟರಿ ಸಂಸ್ಥೆಯವರು ಮುಂದೆಯೂ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ರೋಟರಿ ಸಂಸ್ಥೆ ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ವಲಯ ಸೇನಾನಿ ಎಂ.ಎA. ಪ್ರಕಾಶ್ ಕುಮಾರ್, ಪದಾಧಿಕಾರಿಗಳಾದ ಎಂ.ಡಿ. ಲಿಖಿತ್, ಪಿ.ಕೆ. ರವಿ, ಬಿ.ಎಸ್. ಸುಂದರ್, ಜಿ.ಡಿ. ನವೀನ್, ಬಿ.ಎಲ್. ಶಶಿಧರ್, ಎಸ್.ಬಿ. ಯಶ್ವಂತ್ ಇದ್ದರು.