ಮಡಿಕೇರಿ, ಆ. ೬: ಬಹುತೇಕ ಒಂದು ತಿಂಗಳಿನಿAದ ಸತತವಾಗಿ ಮಳೆಯನ್ನು ಎದುರಿಸುವ ಮೂಲಕ ಜರ್ಜರಿತವಾಗಿದ್ದ ಕೊಡಗು ಜಿಲ್ಲೆ ಇದೀಗ ತುಸು ಚೇತರಿಕೆ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಬಿಸಿಲಿನ ವಾತಾವರಣ ಅಲ್ಲಲ್ಲಿ ಕಂಡು ಬರುವುದರೊಂದಿಗೆ ಮಳೆಯ ತೀವ್ರತೆ ಒಂದಷ್ಟು ಕಡಿಮೆಯಾಗಿದೆ.

ಭಾರೀ ಗಾಳಿ - ಮಳೆಯಿಂದಾಗಿ ಜಿಲ್ಲೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿತ್ತಲ್ಲದೆ ವ್ಯಾಪಕ ನಷ್ಟವೂ ಸಂಭವಿಸಿದೆ. ಅಲ್ಲಲ್ಲಿ ಪ್ರವಾಹ ಭೀತಿಯಿಂದಾಗಿ ಜನರು ಆತಂಕದ ನೆರಳಿನಲ್ಲಿಯೇ ದಿನಕಳೆಯುವಂತಾಗಿತ್ತು. ಜಿಲ್ಲೆಯಾದ್ಯಂತ ವಿದ್ಯುತ್ ಸಮಸ್ಯೆ ನಿರಂತರವಾಗಿ ಮುಂದುವರಿದಿದ್ದು, ಇದೀಗ ಹಂತ ಹಂತವಾಗಿ ವ್ಯವಸ್ಥೆ ಸರಿಯಾಗುತ್ತಿದೆ.

ಪ್ರಸ್ತುತ ಮಳೆ ಒಂದಷ್ಟು ಬಿಡುವು ನೀಡಿದಂತೆ ಕಂಡು ಬರುತ್ತಿದೆಯಾದರೂ ಮತ್ತೆ ಯಾವಾಗ ಬಿರುಸು ತೋರುತ್ತದೆ ಎಂಬ ಆತಂಕದ ಭಾವನೆಯಂತೂ ಜನರಿಂದ ದೂರವಾಗಿಲ್ಲ. ಮಳೆ ಕಡಿಮೆಯಿದ್ದರೂ ಮೋಡದ ವಾತಾವರಣವೇ ಮುಂದುವರಿಯುತ್ತಿದೆ.

೪೪ ಇಂಚು ಅಧಿಕ

೨೦೨೩ಕ್ಕೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಈತನಕ ೪೪ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈತನಕ ೪೭.೮೦ ಇಂಚು ಮಳೆಯಾಗಿದ್ದರೆ ಈ ಬಾರಿ ಸರಾಸರಿ ೯೧.೯೫ ಇಂಚುಗಳಷ್ಟು ಭಾರೀ ಮಳೆ ದಾಖಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈ ತನಕ ೧೨೭.೭೬ ಇಂಚು ಮಳೆಯಾಗಿದೆ. ಕಳೆದ ವರ್ಷ ೮೦.೯೨ ಇಂಚಾಗಿದ್ದು, ಈ ಬಾರಿ ತಾಲೂಕಿನಲ್ಲಿ ಸರಾಸರಿ ೪೬.೮೪ ಇಂಚು ಅಧಿಕ ಮಳೆ ಸುರಿದಿದೆ. ವೀರಾಜಪೇಟೆ ತಾಲೂಕಿನಲ್ಲೂ ಈ ಬಾರಿ ೪೭.೬೮ ಇಂಚುಗಳಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ೩೬.೮೯ ಇಂಚು ಮಳೆಯಾಗಿದ್ದು, ಈ ಬಾರಿ ೮೪.೫೮ ಇಂಚು ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿಗೆ ೪೯ ಇಂಚು, ಸೋಮವಾರಪೇಟೆ ತಾಲೂಕಿಗೆ ೫೨.೦೯ ಹಾಗೂ ಕುಶಾಲನಗರ ತಾಲೂಕಿಗೆ ೨೪.೫೫ ಇಂಚು ಅಧಿಕ ಮಳೆಯಾಗಿದೆ.

ಕಳೆದ ವರ್ಷ ಪೊನ್ನಂಪೇಟೆ ತಾಲೂಕಿನಲ್ಲಿ ೩೮.೨೪ ಇಂಚು, ಸೋಮವಾರಪೇಟೆ ೫೨.೩೫ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ೩೧ ಇಂಚು ಮಳೆಯಾಗಿತ್ತು. ಆದರೆ ಈ ಬಾರಿ ಜನವರಿಯಿಂದ ಈತನಕ ಪೊನ್ನಂಪೇಟೆ ೮೭.೪೪, ಸೋಮವಾರಪೇಟೆ ೧೦೪.೪೫ ಹಾಗೂ ಕುಶಾಲನಗರ ತಾಲೂಕಿಗೆ ೫೫.೫೬ ಇಂಚು ಮಳೆ ಈಗಾಗಲೇ ದಾಖಲಾಗಿದೆ.