ಆ. ೬: ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿರುವ ವೇದಾವತಿ ಎಂಬವರ ಕಾಫಿ ತೋಟದಲ್ಲಿ ಒಣಗಿ ನಿಂತಿದ್ದ ಬಾರೀ ಗಾತ್ರದ ಗೋಳಿಮರವೊಂದು ಬಿದ್ದ ಪರಿಣಾಮ ನಷ್ಟ ಸಂಭವಿಸಿದೆ.
ಮರಬಿದ್ದ ಪರಿಣಾಮ ಆಲೆಮಾಡ ಅಚ್ಚಯ್ಯ ಎಂಬವರ ಮನೆಯ ಕಾಂಪೌAಡ್, ಗೇಟ್ಗೆ ಹಾನಿಯಾಗಿದೆ. ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ೬ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಈ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ಜೊತೆಗೆ ಸಾರ್ವಜನಿಕ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಡಕುಂಟಾಗಿತ್ತು.
ಮಾಹಿತಿ ತಿಳಿದ ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಕೇಶ್ ದೇವಯ್ಯ ಹಾಗೂ ಸದ್ಯಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಚೆಸ್ಕಾಂ ಇಲಾಖೆಯ ಜೆ ಇ ಹೇಮಂತ್ ಕುಮಾರ್ ಹಾಗೂ ಕಂದಾಯ ಇಲಾಖೆಯ ಮಾಳಪ್ಪ ಹಾಗೂ ಅರಣ್ಯ ಇಲಾಖೆಯ ದಿವಾಕರ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿ, ಕೂಡಲೆ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸ್ಪಂದಿಸಿದ ಚೆಸ್ಕಾಂ ಇಲಾಖೆಯ ಜೆ ಇ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬಿದ್ದಿದ್ದ ಕಂಬಗಳನ್ನು ತೆರೆವುಗೊಳಿಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಮರವನ್ನು ತೆರವುಗೊಳಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಮಾತನಾಡಿದ ಚೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಹೇಮಂತ್ ಕುಮಾರ್, ಮರ ಉರುಳಿಬಿದ್ದ ಪರಿಣಾಮ ಆರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ನೂತನ ಕಂಬಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭ ಕಿರುಗೂರು ಗ್ರಾ. ಪಂ. ಅಧ್ಯಕ್ಷ ಚೆಪ್ಪುಡಿರ ರಾಕೇಶ್ ದೇವಯ್ಯ, ಉಪಾಧ್ಯಕ್ಷೆ ಸುನೀತಾ, ಸದಸ್ಯರಾದ ಚಿರಿಯಪಂಡ ರೇಖಾ ಪೆಮ್ಮಯ್ಯ, ಕಾಕೇರ ರವಿ, ಕಟ್ಟಿ ಕಾವೇರಪ್ಪ, ಆಲೆಮಾಡ ಜಗತ್, ಚಿರಿಯಪಂಡ ಕೀರ್ತ ಪೆಮ್ಮಯ್ಯ, ಮತ್ತಿತರರು ಇದ್ದರು.