ಸಿದ್ದಾಪುರ, ಜು. ೨೨: ಧಾರಾಕಾರ ಸುರಿದ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಪ್ರವಾಹದಿಂದಾಗಿ ಜಲಾವೃತಗೊಂಡು, ಕೆಸರು ತುಂಬಿದ್ದ ಮನೆಗಳಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಹದಿಂದ ಕರಡಿ ಗೋಡು ಗ್ರಾಮದ ನದಿ ತೀರದ ತಗ್ಗು ಪ್ರದೇಶದಲ್ಲಿ ಕೆಲವು ಮನೆಗಳು ಜಲಾವೃತಗೊಂಡಿದ್ದು, ಕೆಲವು ಮನೆಗಳ ಒಳಗೆ ನೀರು ನುಗ್ಗಿತ್ತು. ಇದರಿಂದಾಗಿ ಸಂತ್ರಸ್ಥರನ್ನು ಸಿದ್ದಾಪುರದಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ತಹಶೀಲ್ದಾರ್ ನೇತೃತ್ವದಲ್ಲಿ ಸ್ಥಳಾಂತರ ಮಾಡಲಾಗಿತ್ತು. ಇದೀಗ ನೀರು ಇಳಿಮುಖಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಳಿಮುಖಗೊಂಡ ಸ್ಥಳದಲ್ಲಿ ಇರುವ ಮನೆಗಳನ್ನು ತಹಶೀಲ್ದಾರ್ ಪರಿಶೀಲನೆ ನಡೆಸಿದರು.

ಅಲ್ಲದೆ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿದ ಅವರು ಮಳೆಗಾಲದಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ನದಿಗೆ ಇಳಿಯದಂತೆ ಸೂಚನೆ ನೀಡಿದರು. ನದಿಯಲ್ಲಿ ಇಳಿದು ಬಟ್ಟೆ ತೊಳೆಯದಂತೆ ಹಾಗೂ ಮಕ್ಕಳನ್ನು ಸ್ನಾನಕ್ಕೆ ಕಳಿಸದಂತೆ ಸಲಹೆ ನೀಡಿದರು. ಪ್ರವಾಹದಿಂದಾಗಿ ನದಿ ತೀರ ಕುಸಿಯುತ್ತಿರುವುದರಿಂದ ನದಿ ತೀರದ ನಿವಾಸಿಗಳು ಎಚ್ಚರ ವಹಿಸುವಂತೆ ಮನವಿ ಮಾಡಿದರು. ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುವ ಸೂಚನೆ ಕಂಡು ಬಂದಲ್ಲಿ ಕೂಡಲೇ ತಾಲೂಕು ಆಡಳಿತದ ವತಿಯಿಂದ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ಸಂತ್ರಸ್ತರಿಗೆ ತಹಶೀಲ್ದಾರ್ ತಿಳಿಸಿದರು. ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕುಟುಂಬಗಳು ಸೋಮವಾರದಂದು ತಮ್ಮ ಮನೆಗಳಿಗೆ ತೆರಳಿ ಸ್ವಚ್ಛಗೊಳಿಸಿ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದ್ದಾರೆ. ಇದೀಗ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಆಗಿಂದಾಗ್ಗೆ ಕಡಿಮೆಯಾಗುತ್ತಿದೆ. ನದಿ ತೀರದ ನಿವಾಸಿಗಳು ಕೊಂಚ ನಿರಳಾಗಿದ್ದಾರೆ. -ವಾಸು