ಗೋಣಿಕೊಪ್ಪಲು, ಜು.೨೨: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ಸಕಾಲದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಸಿಬ್ಬಂದಿಗಳಿಗೆ ಸಾಧ್ಯವಾಗಿರಲಿಲ್ಲ. ಮಳೆ ಬಿಡುವು ನೀಡುತ್ತಿದ್ದಂತೆಯೇ ಬಹುತೇಕ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಭಾನುವಾರ ರಾತ್ರಿ ತಿತಿಮತಿ ನಗರ ಸೇರಿದಂತೆ ಇನ್ನಿತರ ಸುತ್ತಮುತ್ತಲಿನ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿತ್ತು. ಈ ವೇಳೆ ಗ್ರಾಹಕರಿಗೆ ವಿದ್ಯುತ್ ಕಲ್ಪಿಸಬೇಕೆಂಬ ಹಠ ತೊಟ್ಟ ಚೆಸ್ಕಾಂ ಸಿಬ್ಬಂದಿಗಳು ಕತ್ತಲಿನ ನಡುವೆ, ಟಾರ್ಚ್ ಬೆಳಕಿನ ಸಹಾಯದಿಂದ ವಿದ್ಯುತ್ ಸಮಸ್ಯೆ ಜಾಗವನ್ನು ಹುಡುಕಿಕೊಂಡು ತೆರಳುತ್ತಿದ್ದಂತೆಯೇ ಕಾಫಿ ತೋಟದ ನಡುವೆ ಕಾಡಾನೆಗಳ ಹಿಂಡು ನೆಲೆಸಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ.
ಕೂಡಲೇ ಗೋಣಿಕೊಪ್ಪ, ಚೆಸ್ಕಾಂ ಇಲಾಖೆಯ ಇಂಜಿನಿಯರ್ ಹೇಮಂತ್ಕುಮಾರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾತ್ರಿ ೯ ಗಂಟೆಯಾಗಿದ್ದರೂ ಗ್ರಾಹಕರಿಗೆ ವಿದ್ಯುತ್ ನೀಡುವ ಸಲುವಾಗಿ ಇಂಜಿನಿಯರ್ ಹೇಮಂತ್ ಕುಮಾರ್ ಮತ್ತಷ್ಟು ಸಿಬ್ಬಂದಿಗಳನ್ನು ಜೊತೆ ಮಾಡಿಕೊಂಡು ತಿತಿಮತಿ ಭಾಗಕ್ಕೆ ತೆರಳಿದ್ದಾರೆ. ರಾತ್ರಿ ವೇಳೆ ಅರಣ್ಯ ಇಲಾಖೆಯ ತಿತಿಮತಿ ವಲಯದ ಆರ್ಎಫ್ಒ ಗಂಗಾಧರ್ ಅವರಿಗೆ ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು ಸಮೀಪದಲ್ಲಿಯೇ ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದರಿಂದ ಇದನ್ನು ಸರಿಪಡಿಸಿದಲ್ಲಿ ತಿತಿಮತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಿಬ್ಬಂದಿಗಳ ಸಹಕಾರ ಬೇಕೆಂದು ಮನವಿ ಮಾಡಿದರು.
ಇಂಜಿನಿಯರ್ ಮಾತಿಗೆ ಕೂಡಲೇ ಸ್ಪಂದಿಸಿದ ಆರ್ಎಫ್ಓ ಗಂಗಾಧರ್ ತಮ್ಮ ೫ ಮಂದಿ ಅರಣ್ಯ ಸಿಬ್ಬಂದಿಗಳನ್ನು ಬಂದೂಕು ಸಹಿತ ಚೆಸ್ಕಾಂ ಸಿಬ್ಬಂದಿಗಳೊAದಿಗೆ ಕಳುಹಿಸಿಕೊಡುವ ಮೂಲಕ ಕಾರ್ಯಕ್ಕೆ ಕೈ ಜೋಡಿಸಿದರು. ಅಷ್ಟೊತ್ತಿಗಾಗಲೇ ಸಮಯ ರಾತ್ರಿ ೯ ಗಂಟೆ ದಾಟಿತ್ತು.
ಜಿಟಿಜಿಟಿ ಸುರಿಯುವ ಮಳೆಯ ನಡುವೆ ಅರಣ್ಯ ಸಿಬ್ಬಂದಿಗಳ ಸಹಕಾರದಿಂದ ಚೆಸ್ಕಾಂ ಸಿಬ್ಬಂದಿಗಳು ಟಾರ್ಚ್ ಬೆಳಕಿನ ಸಹಾಯದಿಂದ ತಿತಿಮತಿ ಬಳಿಯ ಸಾವಿರಬಟ್ಟಿ ಎಸ್ಟೇಟ್ ಒಳಗೆ ಪ್ರವೇಶಿಸಿ, ವಿದ್ಯುತ್ ಕಂಬದ ಬಳಿ ಇದ್ದ ಕಾಡಾನೆಗಳನ್ನು ಚದುರಿಸಿ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಿ ರಾತ್ರಿ ೧೦ ಗಂಟೆ ಸುಮಾರಿಗೆ ನಗರಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ವಿದ್ಯುತ್ ಒದಗಿಸುವಲ್ಲಿ ಪ್ರಯತ್ನ ನಡೆಸಿದ್ದಾರೆ. ಚೆಸ್ಕಾಂ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
-ಹೆಚ್.ಕೆ. ಜಗದೀಶ್