ಮಡಿಕೇರಿ, ಜು. ೨೦: ಜಿಲ್ಲೆಯ ಮೂಲನಿವಾಸಿಗಳ ಶ್ರದ್ಧಾ ಹಾಗೂ ಭಕ್ತಿಯ ಕೇಂದ್ರವಾಗಿರುವ ಭಾಗಮಂಡಲ-ತಲಕಾವೇರಿಯಲ್ಲಿ ಶುಲ್ಕ ವಸೂಲಿಯ ನೆಪದಲ್ಲಿ ವಾಹನಗಳನ್ನು ತಡೆದು ಟೋಲ್ ಶುಲ್ಕ ಎಂಬAತೆ ಹಣ ವಸೂಲಿ ಮಾಡುತ್ತಿದ್ದು ಕೂಡಲೇ ಇದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಮೂಲನಿವಾಸಿಗಳನ್ನು ಒಂದುಗೂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಸೇರಿದಂತೆ ಮಾತೆಯನ್ನು ಮನೆ ಮನಗಳಲ್ಲಿ ಆರಾಧಿಸುತ್ತಿರುವ ಜಿಲ್ಲೆಯ ಇತರ ಮೂಲನಿವಾಸಿಗಳಿಗೆ ತಮ್ಮದೇಯಾದ ಆಚಾರ-ವಿಚಾರ, ಧಾರ್ಮಿಕ ಆಚರಣೆಗಳಿದ್ದು, ಇತರ ಜಿಲ್ಲೆಗಳನ್ನು ತೆಗೆದುಕೊಂಡರೆ ಇದು ವಿಭಿನ್ನ ಹಾಗೂ ವಿಶೇಷ ಎನ್ನಬಹುದು. ನಾವು ಭಾಗಮಂಡಲ ತಲಕಾವೇರಿಗೆ ಮೋಜು ಮಸ್ತಿಗಾಗಿ, ಪ್ರವಾಸಕ್ಕೆ ಬರುವವರಲ್ಲ. ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲು, ಹಾಗೂ ಅಗಲಿದ ನಮ್ಮ ಪೂರ್ವಿಕರಿಗೆ ಮೋಕ್ಷವನ್ನು ಬಯಸಿ ನಾವು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಮಾಡುತ್ತೇವೆ ಎನ್ನುವುದನ್ನು ಸ್ಥಳೀಯ ಪಂಚಾಯಿತಿ ಅಥವಾ ಸಂಬAಧಪಟ್ಟವರು ಅರ್ಥ ಮಾಡಿಕೊಳ್ಳಬೇಕಿದೆ.
ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಹುಟ್ಟಿನಿಂದ ಸಾವಿನವರೆಗೂ ಆ ತಾಯಿಯನ್ನು ಬದುಕಿನಲ್ಲಿ ಆರಾಧಿಸಿಕೊಂಡು, ವಿವಿಧ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ವರ್ಷಕೊಮ್ಮೆಯಾದರೂ ಭಾಗಮಂಡಲ ತಲಕಾವೇರಿಗೆ ಭೇಟಿ ನೀಡಿ ತಮ್ಮ ಬೇಕು ಬೇಡಿಕೆಗಳನ್ನು ಆ ತಾಯಿ ಕಾವೇರಿಗೆ ಅರ್ಪಿಸುತ್ತಾರೆ. ಹುಟ್ಟಿದ ಮಗುವಿನ ತಲೆ ಮುಡಿ ಹರಕೆಯಿಂದ ಹಿಡಿದು ಸತ್ತವರ ಹೆಸರಿನಲ್ಲಿ ಕಿರಿಯರು ತಲೆ ಮುಡಿ ಹರಕೆ ಕೊಟ್ಟು ಪಿಂಡ ಪ್ರದಾನ ಮಾಡಿ ಅಗಲಿದ ಆತ್ಮಗಳಿಗೆ ಮೋಕ್ಷವನ್ನು ಕೋರುತ್ತಾರೆ. ಹೀಗಿರುವಾಗ ತಮ್ಮದೆಯಾದ ನೆಲದಲ್ಲಿ ತನ್ನ ಹೆತ್ತ ತಾಯಿಯನ್ನು ನೋಡಲು ಹಣಕೊಟ್ಟು ಹೋಗುವ ದೌರ್ಭಾಗ್ಯ ಬಂದಿರುವುದು ದುರಾದೃಷ್ಟಕರ. ಕೂಡಲೆ ಸ್ಥಳೀಯರಿಗೆ ವಾಹನ ಶುಲ್ಕವಾಗಲಿ ಇನ್ನಿತರ ಶುಲ್ಕವಾಗಲಿ ವಿಧಿಸಕೂಡದ್ದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಹಾಗೇ ಕಾವೇರಿ ಮಾತೆಯ ದರ್ಶನಕ್ಕೆ ಸ್ಥಳೀಯರಿಗೆ ಮುಕ್ತ ವಾತಾವರಣ ಕಲ್ಪಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಪಿಂಡ ಪ್ರದಾನ ಮಾಡುವ ಭಕ್ತರ, ಮೂಲ ನಿವಾಸಿಗಳ ವಾಹನಗಳನ್ನು ತಲಕಾವೇರಿ ಮುಖ್ಯ ದ್ವಾರದ ಕೆಳಗೆ ನಿಲ್ಲಿಸದೆ ಕಾವೇರಿ ಕುಂಡಿಕೆಯ ಬಳಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ಬಿಡುವಂತಾಗಬೇಕು. ಪ್ರವಾಸಿಗರ ವಾಹನಗಳಿಗೆ ಕೆಳಗೆ ನಿಲ್ಲಲ್ಲು ಅವಕಾಶ ಮಾಡಿಕೊಟ್ಟು ಪಿಂಡ ಪ್ರದಾನ ಮಾಡಿದ ಸ್ಥಳೀಯರ ವಾಹನಗಳನ್ನು ಗೇಟಿನ ಒಳಗೆ ಬಿಡುವಂತಾಗಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.