ಸೋಮವಾರಪೇಟೆ, ಜು. ೨೦: ವಾರ್ಷಿಕ ನಿರ್ವಹಣೆಯ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಹಲವಷ್ಟು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿ ಸಿದ್ದು, ಕೆಲವೊಂದು ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಣೆಗೊAಡು ಕೆರೆಗಳು ನಿರ್ಮಾಣವಾಗಿವೆ.

ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾ ಯಿತಿ ವ್ಯಾಪ್ತಿಯ ಹಲವಷ್ಟು ರಸ್ತೆಗಳು ನಿರ್ವಹಣೆಯ ಕೊರತೆಯಿಂದಾಗಿ ಸಂಚಾ ರಕ್ಕೆ ಅಯೋಗ್ಯವಾಗುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಗ್ರಾಮೀಣ ಭಾಗದ ರಸ್ತೆಗಳ ಸ್ಥಿತಿಯಂತೂ ಹೇಳ ತ್ತೀರದ್ದಾಗಿದೆ. ಕೇವಲ ಒಂದು ವಾರದಿಂದ ಸುರಿದ ಮಳೆಗೆ ರಸ್ತೆಗಳು ಈ ಮಟ್ಟಿಗೆ ದುಸ್ಥಿತಿಗೆ ತಲುಪಿದ್ದು, ಮುಂದೆಯೂ ಮಳೆ ರಭಸಗೊಂಡರೆ ಪರಿಸ್ಥಿತಿ ಏನು? ಎಂಬ ಆತಂಕ ಮೂಡಿದೆ. ತಾಲೂಕಿನ ಮಾಲಂಬಿ ಗ್ರಾಮದಿಂದ ಅಂಕನಳ್ಳಿ ಮೂಲಕ ಹಿಪ್ಲಿಗೇಟ್ ಸಂಪರ್ಕಿಸುವ ರಸ್ತೆಯ ಅಂಕನಳ್ಳಿಯಲ್ಲಿ ಚರಂಡಿಯ ಕೊರತೆಯಿಂದ ರಸ್ತೆ ಮೇಲೆ ನೀರು ಸಂಗ್ರಹವಾಗಿದ್ದು, ಸಂಚಾರ ದುಸ್ತರವಾಗಿದೆ.

ಅಂಕನಳ್ಳಿಯ ಬಳಿಯಲ್ಲಿ ರಸ್ತೆಯ ಮೇಲೆಯೇ ಕೆರೆ ನಿರ್ಮಾಣವಾದಂತಾಗಿದೆ. ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ, ಮೋರಿಯ ಕೊರತೆಯಿದೆ. ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಾಣ ಸಂದರ್ಭ ಚರಂಡಿ, ಮೋರಿಯನ್ನು ಮರೆತ ಪರಿಣಾಮ ಇದೀಗ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ತಕ್ಷಣ ಇಲ್ಲಿ ಚರಂಡಿ ನಿರ್ಮಿಸಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಹೆಚ್.ಎಸ್. ಮದನ್, ಸುರೇಶ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

ಇನ್ನು ಸೋಮವಾರಪೇಟೆಯಿಂದ ಹೊಸಬೀಡು ಮಾರ್ಗವಾಗಿ ಕೂತಿ ಸಂಪರ್ಕಿಸುವ ರಸ್ತೆಯ ಸ್ಥಿತಿಯಂತೂ ದೇವರಿಗೆ ಪ್ರೀತಿ ಎಂಬAತಾಗಿದೆ. ತೀರಾ ಇಕ್ಕಟ್ಟಿನ ರಸ್ತೆಯಾಗಿದ್ದು, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ, ಗಿಡಗಂಟಿಗಳ ತೆರವು ಕಾರ್ಯ ನಡೆಸದೇ ಇರುವುದರಿಂದ ಈ ಮಾರ್ಗದಲ್ಲಿ ಸಂಚಾರ ಇನ್ನಷ್ಟು ದುಸ್ತರವಾಗಿದೆ.

ಹೊಸಬೀಡು ಗ್ರಾಮದ ಬಳಿ ಮುಖ್ಯರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲಾಖೆಯ ನಿರ್ಲಕ್ಷö್ಯದಿಂದಾಗಿ ಚರಂಡಿ ನಿರ್ಮಾಣಗೊಂಡಿಲ್ಲ. ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲಿ ಸಂಗ್ರಹಗೊAಡಿದೆ. ಇದು ತಿರುವಿನ ಸ್ಥಳವಾಗಿದ್ದು, ಹಲವಷ್ಟು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇದಲ್ಲದೆ ಕಲ್ಕಂದೂರಿನಿAದ ಕೂತಿ ಗ್ರಾಮದವರೆಗಿನ ೧೩ ಕಿ.ಮೀ. ರಸ್ತೆಯಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಾಣವಾಗಿಲ್ಲ. ಕೆಲವೆಡೆ ಕಾಟಾಚಾರದ ಕೆಲಸ ಮಾಡಿರುವುದರಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆಯ ಮೇಲೆ ಎರಡು ಅಡಿಗಳಷ್ಟು ಮಣ್ಣು ಸಂಗ್ರಹಣೆಗೊAಡಿದೆ.

ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪಟ್ಟಣಕ್ಕೆ ಬರುವ ಮಂದಿ, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೀಗ ಈ ರಸ್ತೆಯಲ್ಲಿನ ಸಂಚಾರ ಹಗ್ಗದ ಮೇಲಿನ ನಡಿಗೆಯಂತಾಗಿದೆ. ತಕ್ಷಣ ಸಂಬAಧಿಸಿದ ಇಲಾಖೆಯ ಮೂಲಕ ತುರ್ತು ನಿರ್ವಹಣೆ ಮಾಡಬೇಕೆಂದು ಕೂತಿ ಗ್ರಾಮಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್, ಸ್ಥಳೀಯರಾದ ಗಿರೀಶ್, ವಿನಯ್, ಉದಯ್‌ಕುಮಾರ್, ಹೊಸಬೀಡು ಗ್ರಾಮದ ಪವನ್, ತೋಳೂರುಶೆಟ್ಟಳ್ಳಿಯ ಜೀವನ್, ಹೇಮಂತ್ ಆಗ್ರಹಿಸಿದ್ದಾರೆ.

ಇನ್ನು ಮಸಗೋಡು-ಕಣಿವೆ ರಸ್ತೆಯ ಸ್ಥಿತಿಯಂತೂ ಹೇಳತ್ತೀರದ್ದಾಗಿದೆ. ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೋಟೆ ಬೆಟ್ಟದ ರಸ್ತೆಯಲ್ಲಿ ಸಂಚಾರಕ್ಕೆ ಸರ್ಕಸ್ ಮಾಡಬೇಕಿದೆ. ಭಾರೀ ಮಳೆಗೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಜಾರನಮನೆಯಿಂದ ಹರಗ ಸಂಪರ್ಕ ರಸ್ತೆ, ಆಲೇಕಟ್ಟೆರಸ್ತೆಯಿಂದ ಹಾನಗಲ್ಲುಬಾಣೆ ಸಂಪರ್ಕ ರಸ್ತೆ, ಅರೆಯೂರು-ಹೊಸಳ್ಳಿ ರಸ್ತೆ ಸೇರಿದಂತೆ ಹಲವಷ್ಟು ಗ್ರಾಮೀಣ ರಸ್ತೆಗಳು ದುಸ್ಥಿತಿಗೆ ತಲುಪಿವೆ.

- ವಿಜಯ್ ಹಾನಗಲ್