ಐಗೂರು, ಜು. ೫: ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಐಗೂರಿನ ಕಿರಗಂದೂರು ರಸ್ತೆಯಲ್ಲಿ ಜಿಯೋ ಕಂಪೆÀನಿಯ ಟವರಿನ ಕೆಲಸವನ್ನು ಪ್ರಾರಂಭಿಸಿದ ಸಂದರ್ಭ ವಾಹನ ಚಲಿಸುವ ರಸ್ತೆಯಲ್ಲಿ ಅರ್ಧ ರಸ್ತೆ ಕಿತ್ತು ಹೋಗಿ ಬೃಹದಾಕಾರದ ಗುಂಡಿಯಾಗಿತ್ತು. ಕಿರಗಂದೂರು ಕಡೆಯಿಂದ ಬಂದ ಟಿಂಬರ್ ಲಾರಿಯೊಂದು ಗುಂಡಿಮಯವಾದ ರಸ್ತೆಯಲ್ಲಿ ಚಲಿಸಿದಾಗ ರಸ್ತೆಯ ಬಲ ಪಾಶ್ವÀðದಲ್ಲಿದ್ದ ವಿದ್ಯುತ್ ಕಂಬಕ್ಕೆ ವಾಲಿದ ಪರಿಣಾಮ ವಿದ್ಯುತ್ ಕಂಬವು ತುಂಡಾಗಿತ್ತು. ನಂತರದ ದಿನಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ಬೃಹದಾಕಾರದ ಗುಂಡಿಯನ್ನು ಮುಚ್ಚದೆ ಇದ್ದು, ಈ ರಸ್ತೆಯಲ್ಲಿ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಗ್ಗೆ ಸ್ಥಳೀಯ ನಿವಾಸಿ ಸೆಲ್ವಂ ಅವರು ನೀಡಿದ ದೂರು ಶಕ್ತಿ ಪತ್ರಿಕೆಯಲ್ಲಿ ೩.೬.೨೦೨೪ ರಂದು ಪ್ರಕಟವಾಗಿತ್ತು. ವರದಿ ಪ್ರಕಟವಾದ ನಂತರ ಐಗೂರು ಗ್ರಾಮ ಪಂಚಾಯಿತಿ ಸದಸ್ಯರು ಕಿತ್ತು ಹೋದ ಅರ್ಧ ರಸ್ತೆಯ ಗುಂಡಿಗೆ ಜಲ್ಲಿ ಮತ್ತು ಎಂ ಸ್ಯಾಂಡ್ ಹಾಕಿ ರಸ್ತೆಯ ಗುಂಡಿಯನ್ನು ಮುಚ್ಚಿಸಿದ್ದಾರೆ. - ಸುಕುಮಾರ.