ಚೆಟ್ಟಳ್ಳಿ, ಜು. ೫: ಭಾರತೀಯ ಕಾಫಿ ಮಂಡಳಿ ಸಂಶೋಧನೆ ಮತ್ತು ಇ-ಕಾಮರ್ಸ್ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಇಂಡಿಯಾ ಕಾಫಿ ಆ್ಯಪ್ಅನ್ನು ಬಿಡುಗಡೆಗೊಳಿಸಲಾಗಿದೆ. ಕಾಫಿ ಮಂಡಳಿಯ ಈ ಸೇವೆಯ ಬಗ್ಗೆ ಉತ್ತಮ ಸ್ಪಂದನ ದೊರಕುತ್ತಿದೆ.
ಆ್ಯಪ್ ಬಳಕೆ ಹೇಗೆ ?
ವಿಶ್ವ ಕಾಫಿ ಮೇಳದಂದು ಭಾರತೀಯ ಕಾಫಿ ಮಂಡಳಿ ಅಭಿವೃದ್ಧಿಪಡಿಸಿದ ಇಂಡಿಯಾ ಕಾಫಿ ಮೊಬೈಲ್ ಆ್ಯಪ್ ಅನ್ನು ಪ್ಲೇ-ಸ್ಟೋರ್ ಮೂಲಕ ಡೌನ್ಲೋಡ್ ಮಾಡಬೇಕು. ವೈಯಕ್ತಿಕ ಮಾಹಿತಿ ಹಾಗೂ ಪಾಸ್ವರ್ಡ್ ಮುಖಾಂತರ ಆ್ಯಪ್ ಅನ್ನು ಬಳಕೆ ಮಾಡಬಹುದಾಗಿದೆ. ಆ್ಯಪ್ನಲ್ಲಿ ವಿವಿಧ ಸವಲತ್ತುಗಳಿಗೆ ಅರ್ಜಿ ಸಲ್ಲಿಸುವುದು, ತರಬೇತಿ, ಮಾಹಿತಿ, ಯೋಜನೆ ಹಾಗೂ ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಇಂಡಿಯಾ ಕಾಫಿ ಆ್ಯಪ್ ಮೂಲಕ ಕಾಫಿ ಬೆಳೆಗಾರರಿಗೆ ಕಸ್ಟಮೈಸ್ ಮಾಡಿದ ಸಲಹೆಗಳು ಲಭ್ಯವಾಗುತ್ತವೆ. ಉತ್ತಮ ಕೃಷಿ ಪದ್ಧತಿಗಳು, ಕೀಟ ಮತ್ತು ರೋಗ ನಿರ್ವಹಣೆ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸುಧಾರಿತ ತಂತ್ರಜ್ಞಾನದ ಬಗ್ಗೆ ಮಾಹಿತಿ ದೊರಕಲಿದೆ. ಕಾಫಿ ಮಂಡಳಿ ಒದಗಿಸುವ ವಿವಿಧ ಸಲಕರÀಣೆಗಳನ್ನು ಆ್ಯಪ್ ಮೂಲಕವೇ ಬುಕ್ಕಿಂಗ್ ಮಾಡಿ ಪಡೆದುಕೊಳ್ಳಬಹುದಾಗಿದೆ. ಸಬ್ಸಿಡಿ ಸೌಲಭ್ಯದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇಂಡಿಯಾ ಕಾಫಿ ಆ್ಯಪ್ ಕಾಫಿ ಬೆಳೆಗಾರರಿಗಲ್ಲದೆ ಉದ್ದಿಮೆದಾರರಿಗೂ ಕಾಫಿ ಮಂಡಳಿಯ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಪಾಲುದಾರರಿಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಕಾಫಿ ಮಂಡಳಿಗೆ ಸಹಾಯ ಮಾಡುತ್ತದೆ. ಇಂಡಿಯಾ ಕಾಫಿ ಆ್ಯಪ್ನ ವೈಶಿಷ್ಟö್ಯಗಳು ಕಾಫಿ ಪಾಲುದಾರರಿಗೆ ಬಳಕೆದಾರರ ಹುಡುಕಾಟದ ವೆಚ್ಚವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವುದರೊಂದಿಗೆ ಅನುಕೂಲವಾಗಲಿದೆ. ಕಾಫಿ ಮಂಡಳಿ ಅಧಿಕಾರಿಗಳಿಗೆ ಆ್ಯಪ್ನ ಬಗ್ಗೆ ತರಬೇತಿ ನೀಡಲಾಗಿದ್ದು, ಹಲವು ಬೆಳೆಗಾರರು ಆ್ಯಪ್ ಬಳಕೆ ಮಾಡುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಆ್ಯಪ್ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ ನಂತರ ಬೆಳೆಗಾರರಿಗೆ ಹಾಗೂ ಕಾಫಿ ಉದ್ಯಮದಾರರಿಗೆ ಆ್ಯಪ್ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುವುದೆಂದು ಕಾಫಿ ಮಂಡಳಿ ತಿಳಿಸಿದೆ.
ಪುತ್ತರಿರ ಕರುಣ್ ಕಾಳಯ್ಯ