ದೇಶದಲ್ಲಿ ನಡೆದ ೧೮ನೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ದಾಖಲೆಯ ೧೦ ಸಾವಿರ ಕೋಟಿ ಅಕ್ರಮ ಸಂಪತ್ತು ವಶಪಡಿಸಿಕೊಂಡಿದೆ.
ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಮಾರ್ಚ್ ೧೬ ರಿಂದ ಜೂನ್ ೩ ರವರೆಗೆ ೧೦ ಸಾವಿರ ಕೋಟಿ ಅಕ್ರಮ ಸಂಪತ್ತು ವಶಪಡಿಸಲಾಗಿದೆ. ಇದರಲ್ಲಿ ನಗದು, ಮದ್ಯ, ಮಾದಕ ಪದಾರ್ಥಗಳು, ಚಿನ್ನಾಭರಣ, ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಕುಕ್ಕರ್, ಸ್ಮಾರ್ಟ್ವಾಚ್, ಫ್ಯಾನ್, ಮಿಕ್ಸಿ, ಅಡುಗೆ ಪಾತ್ರೆಗಳು ಸೇರಿವೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
೨೦೧೯ ರಲ್ಲಿ ನಡೆದ ೧೭ನೇ ಲೋಕಸಭಾ ಚುನಾವಣೆ ಸಂದರ್ಭ ೩,೪೭೭ ಕೋಟಿ ಅಕ್ರಮ ಸಂಪತ್ತು ವಶಪಡಿಸಿಕೊಳ್ಳಲಾಗಿತ್ತು. ಕಳೆದ ೨ ವರ್ಷಗಳಲ್ಲಿ ನಡೆದ ೧೧ ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭ ರೂ. ೩,೫೦೦ ಕೋಟಿ ಅಕ್ರಮ ಸಂಪತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ರೂ. ೫೫೮ ಕೋಟಿ ಅಕ್ರಮ ಸಂಪತ್ತು ವಶಪಡಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ವಾಣಿಜ್ಯ ತೆರಿಗೆ ಇಲಾಖೆ ರೂ. ೩೪೮ ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭ ಚುನಾವಣಾ ಆಯೋಗ ರೂ. ೪೧೩ ಕೋಟಿ ಅಕ್ರಮ ಸಂಪತ್ತು ವಶಪಡಿಸಿಕೊಂಡಿತ್ತು. ಇದರ ಜೊತೆಗೆ ವಾಣಿಜ್ಯ ತೆರಿಗೆ ಇಲಾಖೆ ರೂ. ೩೨೦ ಕೋಟಿ ಮೌಲ್ಯದ ವಸ್ತುಗಳು ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ರೂ. ೨೮೮ ಕೋಟಿ ವಶಪಡಿಸಿಕೊಂಡಿತ್ತು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಚುನಾವಣೆ ಎಂದರೆ ಪ್ರಜಾಪ್ರಭುತ್ವದ ದೊಡ್ಡ ಹಬ್ಬ! ಹಬ್ಬ ಎಂದ ಮೇಲೆ ಹಣವೂ ಯಥೇಚ್ಛವಾಗಿ ವೆಚ್ಚವಾಗಬೇಕಲ್ಲವೆ?! ಚುನಾವಣೆ ನಡೆಸಲು ದೇಶದಲ್ಲಿ ವ್ಯಯಿಸುವ ವೆಚ್ಚಗಳಿಗಿಂತ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿನಿಯೋಗಿಸುವ ಮೊತ್ತ ದಿಗ್ಭಾçಂತಿ ಮೂಡಿಸುತ್ತದೆ!
ಚುನಾವಣೆ ಸಂದರ್ಭ ವೈಯಕ್ತಿಕ ತೇಜೋವಧೆಯ ಆರೋಪ-ಪ್ರತ್ಯಾರೋಪ, ಬಾಡೂಟ, ಮದ್ಯದ ಹೊಳೆ, ಕುರುಡು ಕಾಂಚಾಣದ ವಿಲಕ್ಷಣ ನರ್ತನ ಸಾಮಾನ್ಯ ಎಂಬAತಾಗಿದೆ. ಇಷ್ಟಕ್ಕೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಿದ್ದಾಜಿದ್ದಿಗೆ ಬಿದ್ದು, ಅಕ್ರಮಗಳ ಮೂಲಕವಾದರೂ ಪ್ರಜಾಪ್ರತಿನಿಧಿಗಳಾಗಿ ಆಯ್ಕೆಯಾಗಲು ಬಯಸುವುದೇಕೆ? ಕೇವಲ ಜನಸೇವೆಯ ತುಡಿತವೆ?!
ಭಾರೀ ವೆಚ್ಚ ಮಾಡಿ ಚುನಾವಣೆಯಲ್ಲಿ ಆಯ್ಕೆಯಾಗುವವರು, ಪರಾಜಿತರಾದವರು ಭ್ರಷ್ಟ ಮಾರ್ಗಗಳಲ್ಲಿ ಅದಕ್ಕೆ ದುಪ್ಪಟ್ಟು ಸಂಪಾದಿಸಲು ಮುಂದಾಗುವುದಿಲ್ಲವೆ? ಹಾಗಾದರೆ ಭ್ರಷ್ಟಾಚಾರ ಸರ್ವವ್ಯಾಪಿಯಾಗಲು ಇವರೇ ಮೂಲ ಬೇರಾಗಿ ಪೋಷಿಸುವುದಿಲ್ಲವೆ?
ಪ್ರಜಾಪ್ರತಿನಿಧಿಗಳಿಂದ, ಪ್ರಜೆಗಳಾದರೂ ಬಯಸುವುದೇನನ್ನು? ಸ್ವಚ್ಛ-ಪಾರದರ್ಶಕ ಆಡಳಿತ. ಬಡ ಜನರಿಂದ ತುಂಬಿರುವ ಶ್ರೀಮಂತ ದೇಶ ಭಾರತದ ಜನಸಂಖ್ಯಾ ಬಲ, ಜನಶಕ್ತಿಯಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ವಾಂಗೀಣ ಪ್ರಗತಿಗೆ ಪೂರಕ ಶಾಸನಗಳ ರಚನೆಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಸಿರಾಡಲು ಸ್ವಚ್ಛ ಗಾಳಿ, ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ಆಸರೆಗೆ ಮನೆಯೊಂದಿಗಿನ ಸ್ವಚ್ಛ ಪರಿಸರವಲ್ಲದೆ ಮತ್ತೇನು?!
ಮುಂದಿನ ನೀತಿ ನಿರೂಪಕವಾಗುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ದುಡಿಯುವ ಕೈಗಳಿಗೆ ಕೆಲಸ, ಶಾಂತಿ-ಸೌಹಾರ್ದದೊAದಿಗೆ ಸಮಷ್ಠಿ ಹಿತ. ಸರ್ವರನ್ನೂ ಒಳಗೊಳ್ಳುವ ಪ್ರಗತಿ ಬಯಸಿದರೆ ತಪ್ಪೇನು?
ಹೀಗಾಗಬೇಕಾದರೆ ಮೊದಲು ಚುನಾವಣೆಗಳಲ್ಲಿನ ಅಕ್ರಮಗಳು ನಿಲ್ಲಬೇಕಿವೆ. ಈ ಪ್ರಕ್ರಿಯೆಯಲ್ಲಿ ಹಣದ ಹೊಳೆಗೆ ಬ್ರೇಕ್ ಬೀಳಬೇಕಿದೆ. ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಕಾಯಕ ಇಲ್ಲಿಂದಲೇ ಆರಂಭವಾಗಬೇಕಿದೆ.
‘ಭ್ರಷ್ಟಾಚಾರವನ್ನು ಸಹಿಸುವ ಸಣ್ಣ ಆಲೋಚನೆಯೂ ಬೇಡ. ವ್ಯವಸ್ಥೆ ಸ್ವಚ್ಛವಾಗಿಡಲು ಪಣತೊಡಿ. ರಾಜಕಾರಣಿ ಮತ್ತು ಜನರು ಪ್ರಾಮಾಣಿಕವಾಗಿ ಶುಭ್ರ ವ್ಯಕ್ತಿತ್ವ ಹೊಂದಿರಬೇಕು. ಸ್ವಚ್ಛ, ಪ್ರಾಮಾಣಿಕ ರಾಜಕಾರಣಿ ಆಗಿರದಿದ್ದರೆ, ಅಂತಹವರು ಸಾರ್ವಜನಿಕ ಜೀವನದಿಂದ ದೂರ ಉಳಿಯಿರಿ’ ಎಂಬ ಸಿಂಗಾಪುರದ ಪ್ರಧಾನಿ ಲೀ ಶಿಯನ್ ಲೂಂಗ್ ಅವರ ಹೇಳಿಕೆ ಅರ್ಥಗರ್ಭಿತವಾಗಿದೆ. ಮಾನವನಿಗೆ ಮರ್ಯಾದೆ ಮಾತ್ರ ಶಾಶ್ವತ. ಖ್ಯಾತಿ, ಪ್ರಸಿದ್ಧಿ ಎಲ್ಲವೂ ಕ್ಷಣಿಕ. ಭ್ರಷ್ಟಾಚಾರ ಮಾತ್ರ ಸಹಿಸಲು ಸಾಧ್ಯವಿಲ್ಲ ಎಂಬುದು ಅವರ ಸ್ಪಷ್ಟ ನಿಲುವು.
ವ್ಯಕ್ತಿ ಯಾವುದೇ ಉನ್ನತ ಹುದ್ದೆಯಲ್ಲಿರಲಿ ಅಥವಾ ಕೆಳ ಹಂತದಲ್ಲಿರಲಿ, ವ್ಯವಸ್ಥೆಯನ್ನು ಸ್ವಚ್ಛವಾಗಿಡುವುದೇ ಮುಖ್ಯ ಧ್ಯೇಯವಾಗಿರಲಿ ಎಂಬುದು ಸಿಂಗಾಪುರದ ಮೊದಲ ಪ್ರಧಾನಿ ಲೀ ಕುಆನ್ಯು ಅವರ ನಿಲುವಾಗಿತ್ತು. ನಮ್ಮ ನಾಯಕರೂ ಭ್ರಷ್ಟಾಚಾರ ತೊಡೆದು ಹಾಕಲು ಕಟಿಬದ್ಧತೆ ಪ್ರದರ್ಶಿಸಲಿ.
- ಕಲ್ಲುಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨