೧೯೭೫ನೇ ಇಸವಿಯಲ್ಲಿ ಅಂದು ಕರ್ನಾಟಕ ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿದ್ದ ಸಿ.ವಿ.ಎಸ್. ರಾವ್ ಐ.ಪಿ.ಎಸ್. ಇವರ ಚಿಂತನೆಯ ಸಲುವಾಗಿ ಪ್ರತೀ ವರ್ಷ ಏಪ್ರಿಲ್ ೨ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಪೊಲೀಸ್ ದಿನಾಚರಣೆ ದಿನದಂದು ಧ್ವಜಗಳ ಮಾರಾಟದಿಂದ ಬಂದ ಹಣವನ್ನು ಪೊಲೀಸ್ ಇಲಾಖೆಯಾಗಲೀ, ಕನಿಷ್ಟ ದರ್ಜೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಬಡ ಕುಟುಂಬದವರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ೧೯೭೫ರಿಂದ ಇತ್ತೀಚಿನ ಕೆಲವು ವರ್ಷಗಳವರೆಗೆ ಈ ಕಾರ್ಯಕ್ರಮ ಉತ್ತಮವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ, ಈಗ ಕೆಲವು ವರ್ಷಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ. ೧೯೭೫ನೇ ಇಸವಿಯಲ್ಲಿ ಸಿ.ವಿ.ಎಸ್. ರಾವ್ ಅವರು ನೀಡಿದ ಮಾರ್ಗದರ್ಶನದಂತೆ ನಿವೃತ್ತರಿಗೂ ಸಂಘ ಕಟ್ಟಿ ಸಂಘಟಿತ ಹೋರಾಟ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ೨೦೦೦ನೇ ಇಸವಿಯಲ್ಲಿ ಕೊಡಗಿನಲ್ಲಿ ಜಿಲ್ಲಾ ಅಧೀಕ್ಷಕರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರು ಕೆಲವು ನಿವೃತ್ತರನ್ನು ಜೊತೆಗೂಡಿಸಿ ಸಂಘವನ್ನು ಕಟ್ಟಲು ಪ್ರೇರೇಪಿಸಿದರು. ಅದರಂತೆ ದಿವಂಗತ ಹಾಗೂ ದೈವಾಧೀನರಾಗಿರುವ ಕಾಳೇರಮ್ಮನ ನಾಣಯ್ಯ ಡಿವೈಎಸ್ಪಿ ಇನ್ನೂ ೨೮ ಜನರನ್ನೊಳಗೊಂಡ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾಯಿತು.

೨೦೦೪ನೇ ಇಸವಿಯಲ್ಲಿ ಕೆಲವು ಸಮಾನ ಮನಸ್ಕ ಅಧಿಕಾರಿಗಳು ಜೊತೆಗೂಡಿ ರಾಜ್ಯಮಟ್ಟದಲ್ಲಿ ಒಂದು ಸಂಘ ಸ್ಥಾಪನೆ ಮಾಡುವ ಚಿಂತನೆಗೆ ಚಾಲನೆ ಕೊಟ್ಟು, ಒಂದು ಸಂಘವನ್ನು ಸ್ಥಾಪನೆ ಮಾಡಿದರು. ನಾನೂ ಕೂಡ ಈ ಸಂಘದ ಸ್ಥಾಪಕ ಸದಸ್ಯನಾಗಿ ಪಾಲ್ಗೊಂಡಿದ್ದೆ. ಮುಂದೆ ನಮ್ಮ ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇವರಿಗೆ ಕೂರಲಿಕ್ಕೆ ಸ್ಥಳವಿಲ್ಲದೆ ತಮ್ಮ ಕಡತಗಳನ್ನು ಹವಾಮಾನ ವೈಪರೀತ್ಯಗಳಿಂದ ರಕ್ಷಿಸಲಿಕ್ಕಾಗದೆ ನಂತರ ಒದ್ದಾಡುವ ಪರಿಸ್ಥಿತಿಯಲ್ಲಿದ್ದರು. ಮುಂದೆ ೨೦೦೬ರಲ್ಲಿ ಜಿಲ್ಲಾ ಸಂಘದ ಸದಸ್ಯತ್ವ ಪಡೆದುಕೊಂಡ ನಾನು ೨೦೦೮ರಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿಯಾಗಿದ್ದ ಪಿ.ಎಂ. ಬೆಳ್ಯಪ್ಪ ಅವರನ್ನು ಸಂಪರ್ಕಿಸಿ ಭಾರತದಲ್ಲಿ ಹೆಸರುವಾಸಿಯಾಗಿದ್ದ ಪಿ.ಎಂ. ಮೊಣ್ಣಪ್ಪ ಐ.ಪಿ.ಎಸ್. ಇವರ ಹೆಸರಿನಲ್ಲಿ ಕಟ್ಟಡವೊಂದನ್ನು ಕಟ್ಟಲು ಸಹಾಯ ಮಾಡುವಂತೆ ಕೋರಿಕೊಂಡೆ. ಅವರ ಒಪ್ಪಿಗೆ ದೊರೆತ ಬಳಿಕ ಅಂದು ದಕ್ಷಿಣ ವಲಯ ಮೈಸೂರಿನ ಐ.ಜಿ.ಪಿಯಾಗಿದ್ದ ಜೀವನ್ ಗಾಂವಕರ್ ಅವರ ಸಹೃದಯದ ಕಾರಣದಿಂದ ಇಲಾಖೆಯಿಂದ ಕಟ್ಟಡ ಕಟ್ಟಲು ಜಾಗವು ಮತ್ತು ಸ್ವಲ್ಪ ಮಟ್ಟಿಗಿನ ಧನ ಸಹಾಯವು ಲಭಿಸಿತು. ತಮ್ಮ ಇಲಾಖೆಯ ನಿವೃತ್ತರು ಕೂಡ ತಮ್ಮ ತನು-ಮನ-ಧನದಿಂದ ಸಹಕಾರವನ್ನು ನೀಡಿದರು. ನಿವೃತ್ತರ ಸ್ವಾಭಿಮಾನ ಪ್ರೇರಿತ ಈ ಕಟ್ಟಡವು ‘‘ಸ್ವಾಭಿಮಾನ’’ ಎಂಬ ಹೆಸರಿನಿಂದ ೨೦೧೦ನೇ ಇಸವಿಯಲ್ಲಿ ಉದ್ಘಾಟನೆಯಾಯಿತು. ಬಡ ಪೊಲೀಸರು ನಿವೃತ್ತರಾದ ಬಳಿಕ ಅವರು ಪಡುತ್ತಿದ್ದ ಬವಣೆಯನ್ನು ತೀರಿಸಲು ಮುಂದಾಗಿದೆ. ಬಡವರ ಧನಿಯಾಗಿ ಅವರ ಪರವಾಗಿ ಹೋರಾಡಲು ನುರಿತ ತಜ್ಞರ ಅಧಿಕಾರಸ್ತರ ತಂಡವೊAದು ಹೋರಾಡುತ್ತಿದೆ. ಅವರ ಕಷ್ಟ-ನಷ್ಟಗಳಿಗೆ ಬೆಂಗಾವಲಾಗಿ ಈ ಸಂಘ ನಿಂತಿದೆ.

೨೦೦೦ದ ಇಸವಿಯಲ್ಲಿ ಸ್ಥಾಪಿತಗೊಂಡ ಈ ಸಂಘ ಸ್ವಂತ ಕಟ್ಟಡವನ್ನು ಹೊಂದಿದ್ದು, ಇಡೀ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ. ಅದರಂತೆ ೨೫ ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ, ಅತೀ ಶೀಘ್ರದಲ್ಲಿ ಈ ಸಂಘ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ಕಾರ್ಯದಲ್ಲಿ ನಿವೃತ್ತರ ಬಡ ಕುಟುಂಬಗಳಿಗೆ ಮತ್ತು ವಿಶೇಷವಾಗಿ ವಿಧವಾ ಮಹಿಳೆಯರಿಗೆ ಅವರ ಕಷ್ಟ ಕಾಲದಲ್ಲಿ ಆರ್ಥಿಕ ನೆರವು ಹಾಗೂ ಇನ್ನಿತರ ಸೇವೆಯನ್ನು ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ೨೦೧೮ನೇ ಇಸವಿಯಲ್ಲಿ ಧ್ವಜ ದಿನಾಚರಣೆಯಂದು ಸಂಗ್ರಹವಾಗಿದ್ದ ಸುಮಾರು ೨೦ ಲಕ್ಷಕ್ಕೂ ಅಧಿಕ ಹಣದ ಲೆಕ್ಕಚಾರದ ಬಗ್ಗೆ ಇನ್ನೂ ವಿವರ ಲಭ್ಯವಾಗಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಅತ್ಯಂತ ಶ್ರಮ ವಹಿಸಿದವರು ಇಬ್ಬರು ಪೊಲೀಸ್ ಅಧಿಕಾರಿಗಳು ಕೊಡಗಿನವರೇ ಎಂದು ತಿಳಿಸಲು ವಿಷಾಧಿಸುತ್ತೇನೆ.

- ಎಂ.ಎ. ಅಪ್ಪಯ್ಯ, ನಿವೃತ್ತ ಎಸ್.ಪಿ.