‘ಮೋದಿ, ಬಿಜೆಪಿ, ಆರ್ಎಸ್ಎಸ್ ಮಾತ್ರ ಹಿಂದೂ ಸಮುದಾಯವಲ್ಲ’
ನವದೆಹಲಿ, ಜು. ೧: ಮೋದಿ, ಬಿಜೆಪಿ, ಆರ್ಎಸ್ಎಸ್ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತದ ಪರಿಕಲ್ಪನೆ, ಸಂವಿಧಾನ, ಸಂವಿಧಾನದ ಮೇಲಿನ ದಾಳಿಯನ್ನು ತಡೆಯಲು ಮುಂದಾದವರ ಮೇಲೆ ವ್ಯವಸ್ಥಿತ ಪೂರ್ಣಪ್ರಮಾಣದ ದಾಳಿಗಳು ನಡೆದಿವೆ ಎಂದು ರಾಹುಲ್ ಗಾಂಧಿ ಸದನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಮ್ಮಲ್ಲಿ ಹಲವರ ಮೇಲೆ ವೈಯಕ್ತಿಕ ದಾಳಿ ನಡೆದಿದೆ. ಇನ್ನೂ ಕೆಲವು ನಾಯಕರು ಜೈಲಿನಲ್ಲಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸಿದ ಯಾರಾದರೂ ಹತ್ತಿಕ್ಕಲ್ಪಟ್ಟರು. ಗುರುನಾನಕ್, ಬುದ್ಧ, ಮಹಾವೀರ ಸೇರಿದಂತೆ ಭಾರತದಲ್ಲಿ ಯಾವುದೇ ಮಹಾಪುರುಷರ ಉದಾಹರಣೆ ನೋಡಿದರೂ ಅವರೆಲ್ಲರೂ ಅಹಿಂಸೆಯನ್ನು ಬೋಧಿಸಿದರು, ಹಿಂಸೆಯನ್ನು ವಿರೋಧಿಸಿದವರಾಗಿದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿರುವ, ಹಿಂದೂಗಳೆAದು ಕರೆದುಕೊಳ್ಳುವವರು ಹಿಂದೂ ಧರ್ಮದ ಮೂಲಭೂತವಾದ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ, ಬಿಜೆಪಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಸದನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮಾಜವನ್ನು ಹಿಂಸೆಗೆ ಹೋಲಿಕೆ ಮಾಡುವುದು ಗಂಭೀರವಾದ ವಿಷಯ ಎಂದು ಹೇಳಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ ಮೋದಿ, ಬಿಜೆಪಿ, ಆರ್ಎಸ್ಎಸ್ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಹೇಳಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ, ರಾಹುಲ್ ಗಾಂಧಿಯವರು ಶಿವನ ಚಿತ್ರವನ್ನು ತೋರಿಸಿದರು. ಇದಕ್ಕೆ ಪ್ರತಿಕ್ರ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಫಲಕಗಳನ್ನು ಪ್ರದರ್ಶಿಸಲು ನಿಯಮಗಳು ಅನುಮತಿಸುವುದಿಲ್ಲ ಎಂದು ತಿಳಿಸಿದರು. ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್' ಅನ್ನು ವ್ಯಾಪಾರೀಕರಣ ಮಾಡಲಾಗುತ್ತಿದ್ದು, ಶ್ರೀಮಂತರ ಮಕ್ಕಳಿಗೆ ತಕ್ಕಂತೆ ಮಾಡಲಾಗುತ್ತಿದೆ ಎಂದು ಲೋಕಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟçಪತಿ ಭಾಷಣದ ಕುರಿತು ಖರ್ಗೆ ಅಪಸ್ವರ
ನವದೆಹಲಿ, ಜು. ೧: ರಾಷ್ಟçಪತಿ ದ್ರೌಪದಿ ಮುರ್ಮು ಅವರ ಭಾಷಣದ ಬಗ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ನಿರಾಸೆ ವ್ಯಕ್ತಪಡಿಸಿದ್ದು, ಸಮಾಜದ ದುರ್ಬಲ ವರ್ಗದವರಿಗೆ ಸೌಲಭ್ಯಗಳ ಕೊರತೆಯಂತಹ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸಿ ಬರೀ ಸರ್ಕಾರ ಹೊಗಳುವುದರಲ್ಲಿಯೇ ತುಂಬಿದೆ ಎಂದಿದ್ದಾರೆ. ರಾಷ್ಟçಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಖರ್ಗೆ, ರಾಷ್ಟçಪತಿ ಭಾಷಣವನ್ನು ಸರ್ಕಾರ ರಚಿಸಿದೆ. ಸದನದಲ್ಲಿ ‘ಜೈ ಸಂವಿಧಾನ' ಘೋಷಣೆಯೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂಸದರು ಮತ್ತು ಪಕ್ಷಗಳಿವೆ. ರಾಷ್ಟçಪತಿಗಳ ಜಂಟಿ ಭಾಷಣದಲ್ಲಿ ಯಾವುದೇ ದೂರದೃಷ್ಟಿ ಮತ್ತು ನಿರ್ದೇಶನ ಇಲ್ಲ. ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಪ್ರಸ್ತಾಪವಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ ಖರ್ಗೆ, ವಿಪಕ್ಷಗಳು ಸಾಮಾನ್ಯ ಜನರ ಸಂಕಷ್ಟದ ಬಗ್ಗೆ ಮಾತನಾಡುತ್ತವೆ. ಆದರೆ ಮೋದಿ ಅವರು ಕೇವಲ ‘ಮನ್ ಕಿ ಬಾತ್' ಮಾಡುತ್ತಾರೆ. ಕಳೆದ ಒಂದು ವರ್ಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡಿಲ್ಲ. ಅವರು ಕೇವಲ ಘೋಷಣೆಗಳನ್ನು ನೀಡುವುದರಲ್ಲಿ ನಿಪುಣರು ಎಂದರು.
ಭಾರತೀಯ ನ್ಯಾಯ ಸಂಹಿತೆ ಅಡಿ ರಾಜ್ಯದ ಮೊದಲ ಪ್ರಕರಣ ದಾಖಲು
ಹಾಸನ, ಜು. ೧: ದೇಶದಾದ್ಯಂತ ಜುಲೈ ೧ ರಿಂದ ನೂತನ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಜಾರಿಯಾಗಿದ್ದು, ಇದರಡಿ ರಾಜ್ಯದ ಮೊದಲ ಪ್ರಕರಣ ಹಾಸನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬರುತ್ತಿದ್ದ ವೇಳೆ ತಾಲೂಕಿನ ಸೀಗೆಗೇಟ್ ಬಳಿ ಕಾರು ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಇಂದುಮತಿ (೬೭) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಂದುಮತಿ ಅವರ ಪತಿ ಯೋಗೀಶ್ ಹಾಗೂ ಕಾರು ಚಾಲಕ ಸಾಗರ್ ಗಾಯಗೊಂಡಿದ್ದಾರೆ. ಕಾಶಿ ಯಾತ್ರೆ ಮುಗಿಸಿ ಇಂದುಮತಿ ಜೂನ್ ೩೦ ರಂದು ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಇಂದುಮತಿ ಮತ್ತು ಯೋಗೀಶ್ ದಂಪತಿಯನ್ನು ಜುಲೈ ೧ ರಂದು ಕಾರು ಚಾಲಕ ಸಾಗರ್ ಎಂಬಾತ ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣದಿಂದ ಹಳೇಬೀಡಿಗೆ ಕರೆತರುತ್ತಿದ್ದ. ಕಾರು ಹಾಸನದ ಹಳೆಬೀಡು ರಸ್ತೆಯ ಸೀಗೆಗೇಟ್ ಸಮೀಪದ ಸೇತುವೆಯ ಮೇಲಿನಿಂದ ಉರುಳಿ ಬಿದ್ದಿದೆ. ಇಂದುಮತಿ ಅವರ ಅಳಿಯ ಡಾ.ರವಿ ಎಚ್.ಎಸ್. ನೀಡಿರುವ ದೂರಿನಂತೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ ೨೮೧, ೧೦೬ ಅಡಿ ಸೋಮವಾರ ಬೆಳಿಗ್ಗೆ ೯.೧೫ಕ್ಕೆ ಹಾಸನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂರಜ್ ರೇವಣ್ಣ ೨ ದಿನ ಸಿಐಡಿ ಕಸ್ಟಡಿಗೆ
ಬೆಂಗಳೂರು, ಜು. ೧: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಸಿಐಡಿ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ ಎರಡು ದಿನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಡಾ. ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಕೊನೆಗೊಂಡಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಐದು ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಜೂನ್ ೨೨ರಂದು ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ೮ ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಪತ್ನಿಯನ್ನು ಇರಿದು ಕೊಲೆಗೈದ ಪೇದೆ
ಹಾಸನ, ಜು. ೧: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಎಸ್.ಪಿ.ಗೆ ದೂರು ನೀಡಲು ಬಂದ ಪತ್ನಿಯನ್ನೇ ಪೊಲೀಸ್ ಕಾನ್ಸ್ಟೇಬಲ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಹಾಸನ ನಗರ ಠಾಣೆಯ ಕಾನ್ಸ್ಟೇೆ್ಟಬಲ್ ಲೋಕನಾಥ್ ತಮ್ಮ ಪತ್ನಿ ಮಮತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮೂಲಗಳ ಪ್ರಕಾರ ಲೋಕನಾಥ್ ಮತ್ತು ಮಮತಾ ಮಧ್ಯೆ ೪-೫ ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ಪತ್ನಿ ಮಮತಾ ಬಂದಿದ್ದಾರೆ. ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಮಂದಿ ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಮೃತಪಟ್ಟಿದ್ದಾರೆ. ಇರಿತದ ಬಳಿಕ ಲೋಕನಾಥ್ ತನ್ನ ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿದ್ದ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಮಹಮ್ಮದ್ ಸುಜೀತಾ ತಿಳಿಸಿದ್ದಾರೆ.